ನಾವು ಆಗಾಗ್ಗೆ ನಮ್ಮ ಸ್ನೇಹಿತರನ್ನು ಅಥವಾ ಸಂಬಂಧಿಕರನ್ನು ಬೀಳ್ಕೊಡಲು ಅಥವಾ ಕರೆತರಲು ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿರುತ್ತೇವೆ. ಯಾವುದೇ ಕಾನೂನು ತೊಡಕುಗಳನ್ನು ತಪ್ಪಿಸಲು ನಿಲ್ದಾಣವನ್ನು ಪ್ರವೇಶಿಸುವಾಗ 10 ರೂಪಾಯಿ ನೀಡಿ ಪ್ಲಾಟ್ ಫಾರ್ಮ್ ಟಿಕೆಟ್ ಖರೀದಿಸುತ್ತೇವೆ. ಆದರೆ, ಈ ಪ್ಲಾಟ್ ಫಾರ್ಮ್ ಟಿಕೆಟ್ ನ ಮಾನ್ಯತೆಗೂ (Validity) ಕೆಲವು ನಿರ್ದಿಷ್ಟ ನಿಯಮ ಹಾಗೂ ಮಿತಿಗಳಿವೆ ಎಂಬುದು ನಿಮಗೆ ತಿಳಿದಿದೆಯೇ?
ಸಾಮಾನ್ಯ ಚರ್ಚೆಗಳಲ್ಲಿ ಕೆಲವರು ಪ್ಲಾಟ್ ಫಾರ್ಮ್ ಟಿಕೆಟ್ 4 ಗಂಟೆಗಳವರೆಗೆ ಮಾನ್ಯವಾಗಿರುತ್ತದೆ ಎಂದು ನಂಬುತ್ತಾರೆ. ಆದರೆ, ರೈಲ್ವೆ ನಿಯಮಗಳ ಪ್ರಕಾರ ಪ್ಲಾಟ್ ಫಾರ್ಮ್ ಟಿಕೆಟ್ ನ ಮಾನ್ಯತೆ ಅವಧಿ ಕೇವಲ 2 ಗಂಟೆಗಳು ಮಾತ್ರ!
ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಭಾರತೀಯ ರೈಲ್ವೆಯು ಪ್ಲಾಟ್ ಫಾರ್ಮ್ ಟಿಕೆಟ್ಗಳ ಮೇಲೆ ಕಟ್ಟುನಿಟ್ಟಿನ ಸಮಯದ ಮಿತಿಯನ್ನು ವಿಧಿಸಿದೆ. ಪ್ಲಾ ಟ್ಫಾರ್ಮ್ ಟಿಕೆಟ್ ಗಳು 4 ಗಂಟೆಗಳ ಕಾಲ ಮಾನ್ಯವಾಗಿರುತ್ತವೆ ಎಂಬುದು ಅನೇಕ ಪ್ರಯಾಣಿಕರಲ್ಲಿರುವ ತಪ್ಪು ಕಲ್ಪನೆ. ಆದರೆ, ಕೌಂಟ ರ್ನಲ್ಲಿ ಅಥವಾ ಆಪ್ ಮೂಲಕ ಟಿಕೆಟ್ ವಿತರಿಸಲಾದ ಸಮಯದಿಂದ 2 ಗಂಟೆಗಳ ನಂತರ ಅವು ತಮ್ಮ ಮಾನ್ಯತೆಯನ್ನು ಕಳೆದುಕೊಳ್ಳುತ್ತವೆ. ನೀವು ಇದಕ್ಕಿಂತ ಹೆಚ್ಚು ಸಮಯ ನಿಲ್ದಾಣದಲ್ಲೇ ಇರಬೇಕಾದಲ್ಲಿ, ಹೊಸ ಟಿಕೆಟ್ ಖರೀದಿಸುವುದು ಕಡ್ಡಾಯ.

ಗಡುವು ಮೀರಿದರೆ ಭಾರೀ ದಂಡ!
2 ಗಂಟೆಗಳ ಸಮಯ ಮುಗಿದ ನಂತರವೂ ನೀವು ಪ್ಲಾಟ್ ಫಾರ್ಮ್ ಅಥವಾ ನಿಲ್ದಾಣದ ಅವರಣದಲ್ಲಿದ್ದರೆ, ತಪಾಸಣಾ ಸಿಬ್ಬಂದಿ ಅಥವಾ ಟಿಟಿಇ (TTE) ನಿಮ್ಮನ್ನು ‘ಟಿಕೆಟ್ ರಹಿತ ಪ್ರಯಾಣಿಕ’ ಎಂದೇ ಪರಿಗಣಿಸಬಹುದು. ಅಂತಹ ಸಂದರ್ಭದಲ್ಲಿ ನೀವು ಕನಿಷ್ಠ 250 ರೂಪಾಯಿ ದಂಡ ಅಥವಾ ಆ ಪ್ಲಾಟ್ ಫಾರ್ಮ್ ಗೆ ಬರುವ ಕೊನೆಯ ರೈಲಿನ ಪ್ರಯಾಣ ದರವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ಸಮಯದ ವಿಚಾರದಲ್ಲಿ ಎಚ್ಚರ ವಹಿಸುವುದು ಅತ್ಯಗತ್ಯ.
ಒಂದು ಟಿಕೆಟ್ ಗೆ ಒಬ್ಬರಿಗೆ ಮಾತ್ರ ಪ್ರವೇಶ
ರೈಲ್ವೆ ನಿಯಮಗಳ ಪ್ರಕಾರ, 10 ರೂಪಾಯಿ ಮೌಲ್ಯದ ಪ್ಲಾಟ್ ಫಾರ್ಮ್ ಟಿಕೆಟ್ ಒಬ್ಬ ವ್ಯಕ್ತಿಯ ಪ್ರವೇಶಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ಇದು ಗ್ರೂಪ್ ಪಾಸ್ ಅಲ್ಲ. ಅಷ್ಟೇ ಅಲ್ಲದೆ, ಈ ಟಿಕೆಟ್ ನಿಮಗೆ ಪ್ಲಾಟ್ಫಾರ್ಮ್ಗೆ ಪ್ರವೇಶಿಸಲು ಮಾತ್ರವೇ ಹೊರತು ರೈಲಿನಲ್ಲಿ ಪ್ರಯಾಣಿಸಲು ಅನುಮತಿ ನೀಡುವುದಿಲ್ಲ.








