ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಇರುವ ಬಯಲು ಗಣಪತಿಯೋ ನಾಡಿನ ಒಂದು ಪ್ರಸಿದ್ಧವಾದ ಗಣಪತಿ ದೇವಾಲಯವಾಗಿದೆ.
ಈ ದೇವಾಲಯವು ಕ್ರಿ. ಶ.1570 ರಲ್ಲಿ ಪಾಳೇಗಾರರ ಶೈಲಿಯಲ್ಲಿ ಚಿತ್ರದುರ್ಗವನ್ನು ಆಳುತ್ತಿದ್ದ ಎರಡನೇ ಮದಕರಿ ನಾಯಕ ಅಂದರೆ ಗಡ್ಡದ ಮೆದಕೆರಿನಾಯಕನ ಭಾವ ಮೈದುನನಾಗಿದ್ದ ( ಸ್ಥಳೀಯ ಆಡಳಿತಾಧಿಕಾರಿ ) ಗುಲ್ಯಪ್ಪ ನಾಯಕನು ನಿರ್ಮಿಸಿದನು. ಇದರ ಬಗ್ಗೆ ಶಾಸನವು ಗಣಪತಿ ವಿಗ್ರಹದ ಕೆಳಭಾಗದಲ್ಲಿ ಇರುವುದನ್ನು ಕಾಣಬಹುದು.
ಒಂದು ಐತಿಹ್ಯದಂತೆ ಗುಲ್ಯಪ್ಪ ನಾಯಕನು ತನ್ನ ಆಡಳಿತ ಕೆಲಸಕ್ಕಾಗಿ ವಿಜಯನಗರಕ್ಕೆ (ಹಂಪಿ ) ತೆರಳಿದಾಗ ಅಲ್ಲಿ ಇದ್ದ ಕಡಲೆಕಾಳು ಗಣಪತಿ ಯನ್ನು ಸಂದರ್ಶಿಸಿ ಅದೇ ರೀತಿ ಶಿಲ್ಪವನ್ನು ತನ್ನ ಊರಿನಲ್ಲಿ ಕೂಡ ಮಾಡಿಸಬೇಕೆಂದು ಸಂಕಲ್ಪಿಸಿ ಅದನ್ನು ಕಾರ್ಯರೂಪಕ್ಕೆ ತರುತ್ತಾನೆ ಮತ್ತು ಕಡಲೆಕಾಳು ಗಣಪತಿಯ ಬೆನ್ನಿನ ಭಾಗದಲ್ಲಿ ಪಾರ್ವತಿಯ ಸ್ವರೂಪವಾದ ಜಡೆಯನ್ನು ಹೊಳಲ್ಕೆರೆಯ ಗಣಪತಿಯ ಹಿಂಭಾಗದಲ್ಲೂ ಕಾಣಬಹುದು. ಗಣಪತಿಯನ್ನು ಸರ್ವಮಾನ್ಯವಾಗಿ ಸರ್ವ ಜಾತಿ ಜನಾಂಗದವರು ಸಂದರ್ಶಿಸಿ ಪೂಜೆ ಸಲ್ಲಿಸಬೇಕೆಂದು ಅಪೇಕ್ಷಿಸಿ ಗಣಪತಿಗೆ ದೇವಾಲಯ ನಿರ್ಮಿಸದಿರುವ ಬಗ್ಗೆ ನಿರ್ಧರಿಸುತ್ತಾನೆ ಎಂದು ಹೇಳಲಾಗುತ್ತದೆ.
ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿ ಪೂರ್ವಾಭಿಮುಖವಾಗಿರುವ ಈ ದೇವಾಲಯವು 1972 ರ ವರೆಗೂ ಯಾವುದೇ ದೇವಾಲಯವಿಲ್ಲದೆ ಕೇವಲ ಬಯಲಿನಲ್ಲಿ ಇದ್ದ ಕಾರಣಕ್ಕೆ ಇದಕ್ಕೆ ಬಯಲು ಗಣಪತಿ ಎಂಬ ಹೆಸರು ಬಂದಿತು. 1972 ರಲ್ಲಿ ಈ ಗಣಪತಿ ವಿಗ್ರಹದ ಬಳಿಯಲ್ಲಿಯೇ ಸಿಡಿಲು ಹೊಡೆದ ಕಾರಣಕ್ಕೆ ಇದಕ್ಕೆ ಸಂರಕ್ಷಣೆಯ ದೃಷ್ಟಿಯಿಂದ ದೇವಾಲಯವನ್ನು ನಿರ್ಮಿಸಲಾಯಿತು. ಕಳೆದ ದಶಕದಲ್ಲಿ ಈ ದೇವಾಲಯವನ್ನು ಮತ್ತಷ್ಟು ವಿಸ್ತಾರ ಗೊಳಿಸಿ ರಾಜಗೋಪುರ ನಿರ್ಮಿಸಲಾಯಿತು.
ಸ್ವಾಭಾವಿಕವಾದ ಬಂಡೆಗಳನ್ನು ಬಳಸಿ ಕಡೆಯಲಾದ ಬೃಹದಾಕಾರದ ಗಣೇಶ ಶಿಲ್ಪವಿದು. ಬಯಲು ಗಣಪತಿ ವಿಗ್ರಹವು ಸುಮಾರು 9 ಅಡಿ ಉದ್ದ, ನಾಲ್ಕು ಅಡಿ ಅಗಲವಿದೆ.ವಿಶಾಲವಾದ ಪೀಠದ ಮೇಲಿದೆ. ರಾಜ್ಯದ ನಾಲ್ಕನೇ ಅತಿ ಎತ್ತರದ ಗಣಪತಿ ವಿಗ್ರಹ ಇದಾಗಿದೆ. ಕಣಶಿಲೆಯಲ್ಲಿ ಕಡೆಯಲಾದ ಗಣೇಶನು 4 ಕೈಗಳನ್ನು ಹೊಂದಿದ್ದು,ಅಂಕುಶ,ಪಾಶ ಲೇಖನಿ ಹಾಗೂ ಮೋದಕಗಳನ್ನು ಹಿಡಿದಿರುವನು. ವಿವಿಧ ಆಭರಣಗಳಿಂದ ಅಲಂಕೃತನಾದ ಗಣೇಶನ ಕರಂಡ ಮುಕುಟ,ಕಂಠಹಾರ, ಕೈಕಡಗ ,ಉಂಗುರ,ಭುಜಕೀರ್ತಿ, ನಾಗಬಂಧ, ಕಾಲು ಕಡಗ, ಕಾಲುಂಗುರ,ಯಜ್ಞೋಪವಿತ ಧರಿಸಿರುವನು.
ಈ ದೇವಾಲಯದಲ್ಲಿ ಪ್ರತಿ ತಿಂಗಳ ಸಂಕಷ್ಟಿ ದಿನದಂದು ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ತಮ್ಮ ಹರಕೆ ಈಡೇರಿದ ನಂತರ ಈ ಗಣಪತಿಯ ಹಿಂಭಾಗದಲ್ಲಿ ಜಡೆ ಆಕಾರದ ಕೆತ್ತನೆ ಇದ್ದು ಅದಕ್ಕೆ ಬೆಣ್ಣೆ ಹಚ್ಚುವ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಈ ದೇವರಿಗೆ ಹರಸಿಕೊಂಡರೆ ರಾಹು ಹಾಗೂ ಕುಜ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಈ ದೇವಾಲಯದಲ್ಲಿ ವಿಶೇಷ ಪೂಜೆಗಳು ಹಾಗೂ ವಿಧಿ ವಿಧಾನಗಳು ಅತ್ಯಂತ ವಿಜೃಂಭಣೆಯಿಂದ ಪ್ರತಿದಿನ ನಡೆಯುತ್ತಲೇ ಇರುತ್ತವೆ ಪಂಚಾಭಿಷೇಕ,ರುದ್ರಾಭಿಷೇಕ, ಬೆಣ್ಣೆಪೂಜೆ,ಹೂವಿನ ಅಲಂಕಾರ,ಕುಂಕುಮ ಪೂಜೆ ಹಾಗೂ ಪ್ರತಿ ತಿಂಗಳ ಸಂಕಷ್ಟಮಿ ಅದರಲ್ಲೂ ಮಂಗಳವಾರ ಬರುವ ಸಂಕಷ್ಟಮಿಯಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ.
ಈ ದೇವರಿಗೆ ಕಡುಬಿನ ಹಾರ ಸಮರ್ಪಿಸುವ ಹರಕೆಯು ಇಲ್ಲಿನ ವಿಶೇಷ ಪದ್ಧತಿಯಾಗಿದೆ. ರಾಜ್ಯದ ನಾನಾ ಮೂಲೆಗಳಿಂದ ಹಾಗೂ ಅಕ್ಕಪಕ್ಕದ ರಾಜ್ಯಗಳಿಂದಲೂ ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ ಹಾಗೂ ಈ ದೇವರ ದರ್ಶನಕ್ಕೆ ಆಗಮಿಸುತ್ತಾರೆ.
16ನೇ ಶತಮಾನದ ಕೊನೆಯ ಹೊತ್ತಿಗೆ ಭಕ್ತ ಕನಕದಾಸರು ಇಲ್ಲಿಗೆ ಆಗಮಿಸಿ ಗಣೇಶನ ದರ್ಶನ ಪಡೆದರೆಂದು ತಮ್ಮ ಕಾವ್ಯದಲ್ಲಿ ಹೇಳಿ ಪೊಂಬೊಳಲ ವಿನಾಯಕನ ದರ್ಶನ ಪಡೆದು ನಾನು ಪುನೀತನಾದೆ ಎಂದು ತಿಳಿಸಿದ್ದಾರೆ. (ಹೊಳಲ್ಕೆರೆಯ ಹಿಂದಿನ ಹೆಸರು ಪೊಂಬೊಳಲು). ಇದಕ್ಕೆ ಸಾಕ್ಷಿಕರಿಸುವಂತೆ ಇಲ್ಲಿನ ವೇಣುಗೋಪಾಲ ದೇವಾಲಯದ ಕಂಬದ ಮೇಲೆ ಭಕ್ತ ಕನಕದಾಸರ (ಹದಿನಾರನೇ ಶತಮಾನದಲ್ಲಿ ಜೀವನೋತರ ಗೊಳಿಸಿರುವುದು.) ಶಿಲ್ಪವನ್ನು ಕೆತ್ತಿದ್ದಾರೆ.
ಹೊಳಲ್ಕೆರೆ ಭಾಗದಲ್ಲಿ ಮಳೆ ಬಾರದಿದ್ದರೆ ಅಥವಾ ಮಳೆ ತಡವಾದರೆ ಹತ್ತಿರದ ಭೈರವೇಶ್ವರ ದೇವಾಲಯದ ಬಾವಿಯಿಂದ 101 ಬಿಂದಿಗೆ ನೀರು ತಂದು ಗಣಪತಿಗೆ ಅಭಿಷೇಕ ಪೂಜೆ ಮಾಡಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಇದೆ. ಹೊಳಲ್ಕೆರೆ ಬಸ್ ನಿಲ್ದಾಣಗಳಿಂದ ಉತ್ತಮ ರಸ್ತೆ ಸಂಪರ್ಕವಿದೆ.







