ನಮ್ಮೂರು ನಮ್ಮ ಹೆಮ್ಮೆ : ಚಿತ್ರದುರ್ಗ : ಮಾನಂಗಿ ಗ್ರಾಮದ ಪರಿಚಯ

3 Min Read

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

 

ಸುದ್ದಿಒನ್

ಮಾನಂಗಿ ಗ್ರಾಮವು ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 9 ಕಿಲೋಮೀಟರ್ ದೂರ ಪಶ್ಚಿಮಕ್ಕೆ,ಚಿತ್ರದುರ್ಗ- ಸಂತೆಬೆನ್ನೂರು ರಾ. ಹೆ.48.ರ ಮಾರ್ಗದಲ್ಲಿದೆ.

ಮಾನಂಗಿ ಎಂದರೆ ಸಣ್ಣಬಾವಿ, ನೀರಿನ ಸೆಲೆ ಎಂಬ ಅರ್ಥವಿದೆ. ನೀರಿನ ಸೆಲೆಯ ಬಳಿಯಲ್ಲಿ ನಿರ್ಮಾಣ ಮಾಡಲಾದ ಈ ಗ್ರಾಮಕ್ಕೆ ಈ ಹೆಸರು ಅನ್ವರ್ಥಕವಾಗಿದೆ.
ಗ್ರಾಮದ ಅರ್ಧ ಕಿಲೋಮೀಟರ್ ದೂರದಲ್ಲಿ (ಆಂಜನೇಯ ಪ್ರೌಢಶಾಲೆಯ ಬಳಿ ) ದಕ್ಷಿಣಕ್ಕೆ ಹಳೆಯ ಗ್ರಾಮ ನಿವೇಶನವಿದ್ದು ಅದು ಈಗ ಬೇಚರಾಕ್ ಆಗಿದೆ. ಅಲ್ಲಿಂದ ಈಗಿನ ಗ್ರಾಮದ ಜಾಗಕ್ಕೆ ಸ್ಥಳಾಂತರಗೊಂಡಿದೆ.
ಗ್ರಾಮವು ಐತಿಹಾಸಿಕವಾಗಿದ್ದರೂ ಐತಿಹಾಸಿಕ ಕುರುಹುಗಳೆಲ್ಲವೂ ಹಳೆಯ ಗ್ರಾಮ ನಿವೇಶನಗಳಲ್ಲಿ ಕಂಡುಬರುತ್ತದೆ. ನೂತನ ಗ್ರಾಮ /ಜನವಸತಿ ಪ್ರದೇಶದಲ್ಲಿ ಯಾವುದೇ ಐತಿಹಾಸಿಕ ಕುರುಹುಗಳು ಕಂಡು ಬರುವುದಿಲ್ಲ.
ಹಳೆ ಗ್ರಾಮ ನಿವೇಶನದಲ್ಲಿ ಇಂದು ಆಂಜನೇಯಸ್ವಾಮಿ ಹಾಗೂ ಈಶ್ವರ ದೇವಾಲಯಗಳಿವೆ.

 

ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮವು ಸಮತಟ್ಟು ಒಣ ಭೂಲಕ್ಷಣದ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.
ಸಮತಟ್ಟು ಮೈದಾನ ಪ್ರದೇಶವು ಸಂಪೂರ್ಣ ಒಣಭೂಮಿಯಾಗಿದೆ.

ಕೆರೆ :
ಗ್ರಾಮದ ದಕ್ಷಿಣ ಭಾಗದ ಕಳ್ಳಿಹಟ್ಟಿಯಲ್ಲಿರುವ ಕೆರೆಯು 100 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದ್ದು,ಇದಕ್ಕೆ ಜಾನುಕೊಂಡ ಗ್ರಾಮದ ಪೂರ್ವಭಾಗದಲ್ಲಿರುವ ಹೆಜ್ಜೇನುಕಲ್ಲು ಬೆಟ್ಟದ ಉತ್ತರಭಾಗದ ಆಕಳೇರಮ್ಮ ಗುಡ್ಡದಿಂದ ಹರಿದು ಬರುವ ಹಳ್ಳಗಳು ಈ ಕೆರೆಗೆ ಪ್ರಮುಖ ನೀರಿನ ಸೆಲೆಯಾಗಿದೆ. ಕೆರೆ ತುಂಬಿದ ನಂತರ ಮುಂದೆ ಉತ್ತರಭಾಗದ ಕಾತ್ರಾಳು ಕೆರೆಗೆ ಹರಿಯುತ್ತದೆ.

ರಂಗಪಟ್ಟಣದ ಆಂಜನೇಯ ಸ್ವಾಮಿ ದೇವಾಲಯ :
ಮಾನಂಗಿ ಗ್ರಾಮದಿಂದ ಉತ್ತರಕ್ಕೆ ಹೊಸಹಳ್ಳಿಗೆ ಹೋಗುವ ದಾರಿಯಲ್ಲಿರುವ ರಂಗಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನವನ್ನು ಮಾನಂಗಿ ಆಂಜನೇಯಸ್ವಾಮಿ ಎಂದೇ ಆಡುಭಾಷೆಯಲ್ಲಿ ಕರೆಯಲಾಗುತ್ತದೆ.1557-1603 ರವರೆಗೂ ಚಿತ್ರದುರ್ಗವನ್ನು ಆಳಿದ ಮತ್ತಿತಿಮ್ಮಣ್ಣನಾಯಕನ ಮಗ ಒಂದನೇ ಓಬಣ್ಣ ನಾಯಕನು ಈ ಸ್ಥಳದಲ್ಲಿ ತಮ್ಮ ಮನೆದೇವರಾದ ನೀರ್ಥಡಿ ಶ್ರೀರಂಗನಾಥಸ್ವಾಮಿಯ ಹೆಸರಿನ ಮೇಲೆ ಒಂದು ಪಟ್ಟಣವನ್ನು ನಿರ್ಮಾಣ ಮಾಡಿ ಅದಕ್ಕೆ ರಂಗಪಟ್ಟಣ ಎಂದು ಹೆಸರಿಸಿದ್ದನು. ಕಾಲಾನಂತರದಲ್ಲಿ ಈ ಪಟ್ಟಣವು ಬೇಚರಾಕ್ ಆಯಿತು.ಆತನು ಇಲ್ಲಿಯೇ ಕೆಲಕಾಲ ನೆಲೆಸಿದ್ದನು ಎನ್ನಲಾಗುತ್ತದೆ. ಈ ಸ್ಥಳದಿಂದ ಪಶ್ಚಿಮಕ್ಕೆ ಹಡವನಹಾಳ್ ( ಹಳೆ ಹಳಿಯೂರು ಗ್ರಾಮ )ಎಂಬಲ್ಲಿ ಆತನ ಕಲಾತ್ಮಕ ಸಮಾಧಿ ಇತ್ತೀಚಿನವರೆಗೂ ಇದ್ದಿದ್ದು, ಇತ್ತೀಚಿನ ದಿನಗಳಲ್ಲಿ ಅದು ನಾಶವಾಗಿದೆ.

ಆಂಜನೇಯಸ್ವಾಮಿ ದೇವಾಲಯವು ಹಿಂದೆ ಪಾಳೇಗಾರರ ಶೈಲಿಯಲ್ಲಿ ನಿರ್ಮಿಸಲಾಗಿತ್ತು.ಇತ್ತೀಚಿನ ವರ್ಷಗಳಲ್ಲಿ ಅದನ್ನು ತೆಗೆದು ನೂತನವಾಗಿ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ 16-17 ನೇ ಶತಮಾನದ ಪಾಳೇಗಾರರ ಕಾಲದ ಆಂಜನೇಯಸ್ವಾಮಿ ಶಿಲ್ಪವನ್ನು ಪೂಜಿಸಲಾಗುತ್ತದೆ. ಈ ದೇವರಿಗೆ ಹತ್ತಾರು ಊರುಗಳ ಜನರು ನಡೆದುಕೊಳ್ಳುತ್ತಾರೆ. ಹೂವಿನ ಪ್ರಸಾದದ ರೂಪದಲ್ಲಿ ಕೊಡುವ ಅಪ್ಪಣೆಯ ಮೇರೆಗೆ ಜನರು ತಮ್ಮ ಕಾರ್ಯಗಳನ್ನು ನಿರ್ಧರಿಸಿ ಮುಂದುವರೆಯುತ್ತಾರೆ.

ಸಿದ್ದಾಪುರ,ಹಳಿಯೂರು, ಹೊಸಹಳ್ಳಿ,ಕಳ್ಳಿಹಟ್ಟಿ… ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ದೇವಾಲಯಗಳು :

1. ಆಂಜನೇಯ ಸ್ವಾಮಿ ದೇವಸ್ಥಾನ:
ಗ್ರಾಮದ ಪ್ರೌಢಶಾಲೆಯ ಹತ್ತಿರವಿರುವ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ವಿಜಯನಗರೋತ್ತರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ 16-17 ನೇ ಶತಮಾನದ ಶಿಲ್ಪವಿದ್ದು ಪೂಜಿಸಲಾಗುತ್ತದೆ.
ಈ ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ .
ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

2. ಶ್ರೀರಾಮ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀರಾಮ ಮಂದಿರವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹದಲ್ಲಿ ಶ್ರೀ ರಾಮ, ಲಕ್ಷ್ಮಣ,ಹನುಮಂತ, ಸೀತೆಯ ಶಿಲ್ಪಗಳಿದ್ದು ಪೂಜಿಸಲಾಗುತ್ತದೆ.

3. ದುರ್ಗಾಂಬಿಕಾದೇವಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಾಲಯವು ಸ್ಥಳೀಯ ಶೈಲಿಯಲ್ಲಿದ್ದು,
ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
ಈ ದೇವಾಲಯದ ಗರ್ಭಗೃಹದಲ್ಲಿ ದುರ್ಗಾಂಬಿಕಾ ದೇವಿಯನ್ನು ಪೂಜಿಸಲಾಗುತ್ತದೆ.
ಈ ದೇವಿಯ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ನೆರವೇರಿಸಲಾಗುತ್ತದೆ.

4.ಗಣಪತಿ ದೇವಸ್ಥಾನ: ಗ್ರಾಮದ ಮಧ್ಯಭಾಗದಲ್ಲಿರುವ ಗಣಪತಿ ದೇವಸ್ಥಾನವು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಉತ್ತರಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.

5. ಈಶ್ವರ ದೇವಸ್ಥಾನ:
ಗ್ರಾಮದ ಕಳ್ಳಿಹಟ್ಟಿ ರಸ್ತೆಯಲ್ಲಿರುವ ಕೆರೆಯ ಉತ್ತರಭಾಗದ ದಂಡೆಯ ಏರಿಯ ಹತ್ತಿರ ಇರುವ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ 16-17ನೇ ಶತಮಾನದ ಪಾಳೆಯಗಾರರ ಕಾಲದ ಈಶ್ವರಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.
ದೇವಾಲಯದ ಹೊರಭಾಗದಲ್ಲಿ ವೀರಗಲ್ಲು ಇದ್ದು,ಹಿಂದೆ ಯೋಧರು ಯುದ್ಧ ಭೂಮಿಯಲ್ಲಿ ಮಡಿದ ಸ್ಮರಣಾರ್ಥವಾಗಿ ಇದನ್ನು ಮಾಡಲಾಗಿದೆ. ಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

6. ಅಂಜನೇಯಸ್ವಾಮಿ -ಬೇವಿನಾಳಮ್ಮ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಉತ್ಸವಮೂರ್ತಿಗಳಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ.
ಪ್ರತಿವರ್ಷ ನಡೆಯುವ ಜಾತ್ರಾ ಸಮಯದಲ್ಲಿ ಉತ್ಸವಮೂರ್ತಿಗಳನ್ನು ಇಲ್ಲಿಂದ ಗ್ರಾಮದ ಹೊರಭಾಗದ ಈಶ್ವರ ದೇವಾಲಯದವರೆಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಗುತ್ತದೆ.
ಗರ್ಭಗೃಹ ಹಾಗೂ ಸಭಾಮಂಟಪಗಳನ್ನು ಈ ಮಂದಿರ ಹೊಂದಿದೆ. ಗರ್ಭಗೃಹದಲ್ಲಿ ಆಂಜನೇಯಸ್ವಾಮಿ ಹಾಗೂ ಬೇವಿನಾಳಮ್ಮನ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು,
ಪೂಜಿಸಲಾಗುತ್ತದೆ.

7.ಕರಿಯಮ್ಮ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಕರಿಯಮ್ಮ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಗರ್ಭಗೃಹದಲ್ಲಿ ಕರಿಯಮ್ಮ ದೇವಿಯನ್ನು ಪೂಜಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *