ವಿಶೇಷ ಲೇಖನ :
ಡಾ ಕೆ ವಿ ಸಂತೋಷ್ ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ, ಮೊ : 9342466936

ಚನ್ನಗಿರಿಯಿಂದ ಭದ್ರಾವತಿಗೆ ಹೋಗುವ ಮುಖ್ಯ ಮಾರ್ಗದ ಕೆ.ಗಾಣದಕಟ್ಟೆ ಗ್ರಾಮದಿಂದ ದಕ್ಷಿಣಕ್ಕೆ 4 ಕಿ.ಮೀ.ಕಾಡಿನಲ್ಲಿ ಪ್ರಯಾಣಿಸಿದರೆ ಅಮ್ಮನ ಗುಡ್ಡ/ ದೇವಸ್ಥಾನ ಸಿಗುತ್ತದೆ. ರಾಜ್ಯದ ಅತ್ಯಂತ ದಟ್ಟ ಅರಣ್ಯಗಳಲ್ಲಿ ಒಂದಾದ ಈ ಜಾಗಕ್ಕೆ ತಲುಪಲು ಹಿಂದೆಲ್ಲಾ ಅರಣ್ಯದ ಕಾಲುದಾರಿಯ ಮಣ್ಣಿನ ರಸ್ತೆ ಮಾತ್ರ ಇದ್ದಿತು.ಕಳೆದ ದಶಕದಿಂದ ಈಚೆಗೆ ಇಲ್ಲಿ ಡಾಂಬರು ರಸ್ತೆ ನಿರ್ಮಾಣವಾಗಿದೆ.ಇಲ್ಲಿಗೆ ತಲುಪಲು ಹಿಂದೆಲ್ಲ 80-90 ದಶಕದಲ್ಲಿ ಹರಸಾಹಸಪಟ್ಟು ಚಕ್ಕಡಿ ಗಾಡಿಗಳಲ್ಲಿ ಕಾಡಿನ ಮಧ್ಯದಲ್ಲಿ ನಡೆದುಕೊಂಡು ಬರಬೇಕಾಗಿತ್ತು. ಈಗೆಲ್ಲ ವಾಹನ ಸೌಕರ್ಯ ಉತ್ತಮವಾಗಿದ್ದು ವೈಯಕ್ತಿಕ ವಾಹನ ಸೌಲಭ್ಯವಿರುವ ಕಾರಣಕ್ಕೆ ಸದಾಕಾಲ ಭಕ್ತರು- ಪ್ರವಾಸಿಗರಿಂದ ಈ ಜಾಗವು ತುಂಬಿರುತ್ತದೆ.
ಅಕ್ಕಪಕ್ಕದ ಜಿಲ್ಲೆ/ ತಾಲ್ಲೂಕುಗಳ ಸಾವಿರಾರು ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ.ಈ ಸ್ಥಳವು ಶಕ್ತಿದೇವತೆಗೆ ಸಂಬಂಧಿಸಿದ ಪ್ರಮುಖ ಭಕ್ತಿ ಕೇಂದ್ರವಾಗಿದೆ.ನೂರಾರು ವರ್ಷಗಳಿಂದ ಈ ದೇವರನ್ನು ವನದೇವತೆಯೆಂದು ಪೂಜಿಸಲಾಗುತ್ತದೆ. ಹತ್ತಿರದ ಹೊಸಹಳ್ಳಿವರೆಗೂ ಇಲ್ಲಿ ಯಾವುದೇ ಜನವಸತಿ ಪ್ರದೇಶ ಇರುವುದಿಲ್ಲ, ಬೇಚಾರಕ್ ಗ್ರಾಮ ಕೂಡ ಇರುವುದಿಲ್ಲ.
ದೇವಾಲಯದ ಪರಿಚಯ :
ಕಳೆದ ದಶಕದವರೆಗೂ ಇಲ್ಲಿ ಮಲೆನಾಡ ಸಾಂಪ್ರದಾಯಿಕ ನಾಡ ಹೆಂಚುಗಳ ಮಂದಿರವಿದ್ದಿತು.
ನಂತರ ಅದನ್ನು ತೆಗೆದು ನೂತನವಾಗಿ ಇದೀಗ
ದ್ರಾವಿಡ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ.
ಗರ್ಭಗೃಹ ಹಾಗೂ ತೆರೆದ ಸಭಾಮಂಟಪಗಳಿದ್ದು,
ದೇವಾಲಯದ ಸುತ್ತಲೂ ವಿಶಾಲವಾದ ಪ್ರಾಂಗಣವಿದೆ.
ದೇವಾಲಯವು ಪೂರ್ವಾಭಿಮುಖವಾಗಿದ್ದು, ಪೂರ್ವದಿಕ್ಕಿನಲ್ಲಿ ನೂತನ ರಾಜಗೋಪುರವನ್ನು ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ಆರು ಅಡಿ ಎತ್ತರದ ಕುಕ್ಕುವಾಡೇಶ್ವರಿ ದೇವಿಯ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಶಿಲ್ಪದ ಕೈಯಲ್ಲಿ ಚಿಕ್ಕಮಗುವಿನ ಕೆತ್ತನೆಯಿದ್ದು ಇದನ್ನು ಸ್ಕಂದನೆಂದು ಕರೆಯುತ್ತಾರೆ.ಈ ದೇವಿಯನ್ನು ರೇಣುಕಾ ದೇವಿಯ ಸ್ವರೂಪವೆಂದು ಪೂಜಿಸಿ ಕಂದನನ್ನು ಪರಶುರಾಮನೆಂದು ಪರಿಭಾವಿಸಿ ಭಕ್ತರು ನಮನಗಳನ್ನು ಸಲ್ಲಿಸುತ್ತಾರೆ. ಗರ್ಭಗೃಹಕ್ಕೆ ಎತ್ತರದ ಬಾಗಿಲವಾಡವಿದ್ದು, ವಿಶಾಲವಾದ ತೆರೆದ ಸಭಾಮಂಟಪವಿದೆ.
ಕಂಬಗಳು ಆಕರ್ಷಕ ಅಲಂಕರಣೆಗಳನ್ನು ಹೊಂದಿವೆ.
ಈ ದೇವಸ್ಥಾನದ ಎಡಭಾಗದಲ್ಲಿ ಪರಶುರಾಮನ ಗುಡಿ ಹಾಗೂ ಮುಂಭಾಗದಲ್ಲಿ ಮಾತಂಗಮ್ಮನ ಗುಡಿ ಇದೆ.
ಕುಕ್ಕುವಾಡವೆಂದರೆ ದೇವತೆಯು ವಾಸವಾಗಿರುವ ಜಾಗವೆಂಬ ಅರ್ಥವಿದೆ ಎಂದು ಹಿರಿಯ ಸಂಶೋಧಕರಾದ ಡಾ. ರಮೇಶ ನಾಯಕ ದಾಖಲಿಸುತ್ತಾರೆ. ಕಾಡಿನ ಮಧ್ಯೆ ವಿಶಾಲವಾದ ಜಾಗದಲ್ಲಿ ನಿರ್ಮಾಣವಾಗಿರುವ ಈ ದೇವಾಲಯದ ಪರಿಸರ ತುಂಬಾ ಆಕರ್ಷಕ ಹಾಗೂ ಮನಸ್ಸಿಗೆ ಆನಂದ ಉಂಟುಮಾಡುತ್ತದೆ.
ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿಗೆ ಭಕ್ತರು ಭೇಟಿ ನೀಡುತ್ತಾರೆ.
ಅದರಲ್ಲೂ ಮಂಗಳವಾರ, ಶುಕ್ರವಾರ,ಅಮಾವಾಸ್ಯೆ, ಹುಣ್ಣಿಮೆಯ ದಿನ ಇಲ್ಲಿ ಜನ ಜಾತ್ರೆಯೇ ನೆರೆಯುತ್ತದೆ. ಬಂದ ಭಕ್ತರು ಈ ದೇವರಿಗೆ ಇಲ್ಲಿಯೇ ಅಡುಗೆ ತಯಾರಿಸಿ ಎಡೆಮಾಡಿ ಊಟ ಮಾಡಿಕೊಂಡು ಹೋಗುತ್ತಾರೆ.ಬಂದ ಭಕ್ತರಿಗೆ ಇಲ್ಲಿ ಮೂಲಭೂತ ಸೌಲಭ್ಯಗಳಿವೆ. ಮುಂಚಿನ ದಿನಗಳಲ್ಲಿ ಭಕ್ತರು ಇಲ್ಲಿಗೆ ಆಗಮಿಸಿದಾಗ ಎರಡು-ಮೂರು ದಿನ ತಂಗುತ್ತಿದ್ದರು.ಆಧುನಿಕ ಕಾಲಘಟ್ಟದಲ್ಲಿ ಇವೆಲ್ಲ ಈಗ ಮರೆಯಾಗಿವೆ. ದೇವಾಲಯದ ಬಳಿಯಲ್ಲಿಯೇ ಕುಕ್ವಾಡೇಶ್ವರಿ ದೈವಿವನ ಹಾಗೂ ಜಿಂಕೆವನವಿದೆ.
ದೇವಾಲಯದಿಂದ ಪೂರ್ವಕ್ಕೆ1 ಕಿಲೋಮೀಟರ್ ದೂರದಲ್ಲಿ ಹೊಂಡವಿದೆ. ಆಧುನಿಕತೆಯ ಗೌಜುಗದ್ದಲ ಹಾಗೂ ನಾಗರಿಕ ಪ್ರಪಂಚದಿಂದ ದೂರವಾಗಿ ಒಂದು ದಿನದ ಪಿಕ್ನಿಕ್ಕಿಗೆ ಹಾಗೂ ನಿಸರ್ಗದ ಮಡಿಲಲ್ಲಿ ಕಾಲಕಳೆಯಬೇಕೆನ್ನುವವರು ಈ ಜಾಗಕ್ಕೆ ಭೇಟಿ ನೀಡಬಹುದು.ಇಲ್ಲಿ ಯಾವುದೇ ಮೊಬೈಲ್ ಸಿಗ್ನಲ್ ದೊರಕುವುದಿಲ್ಲ.
ಇಲ್ಲಿನ ಕಾಡು ಮುಂದೆ ಉಬ್ರಾಣಿಯವರೆಗೂ ಹಬ್ಬಿದೆ.ಮಳೆಗಾಲದಲ್ಲಂತೂ ಇಲ್ಲಿನ ಪರಿಸರ ಹಸಿರಿನಿಂದ ತುಂಬಿ ತುಳುಕುತ್ತಿರುತ್ತದೆ. ಹತ್ತಿರದ ಜಿಂಕೆ ವನದಲ್ಲಿ ಸ್ವಚ್ಛಂದವಾಗಿ ನೂರಾರು ಜಿಂಕೆಗಳು ಗುಂಪುಗುಂಪಾಗಿ ಓಡಾಡುವುದನ್ನು ಕಣ್ತುಂಬಿಕೊಳ್ಳಬಹುದು.
80 ರ ದಶಕದವರೆಗೂ ಇಲ್ಲಿ ನೂರಾರು ಕಾಡುಪ್ರಾಣಿಗಳು ರಸ್ತೆಯ ಅಂಚಿನಲ್ಲೇ ಓಡಾಡುವುದನ್ನು ಇಲ್ಲಿಗೆ ಭೇಟಿ ನೀಡುತ್ತಿದ್ದ ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಆದರೆ ಇಂದು ಯಾವುದೇ ಕಾಡು ಪ್ರಾಣಿಗಳು ಕಣ್ಣಿಗೆ ಸುಲಭವಾಗಿ ಬೀಳುವುದಿಲ್ಲ. ದೇವಾಲಯಕ್ಕೆ ಹೋಗುವ ದಾರಿಯಲ್ಲಿ ದೇವಿಯ ಪಾದಗಟ್ಟೆ ಇದ್ದು ಇಲ್ಲಿ ಭಕ್ತರು ತಮ್ಮ ಮನಸ್ಸಿನ ಆಸೆ ಈಡೇರಲು ಹರಕೆಮರಕ್ಕೆ ಹರಕೆ ಬಟ್ಟೆ ಕಟ್ಟುತ್ತಾರೆ.















