ಬೆಂಗಳೂರು, ಆಗಸ್ಟ್.08 : ಸಿದ್ದರಾಮಯ್ಯ ಸಂಪುಟದ ಮತ್ತೊಬ್ಬ ಸಚಿವರ ರಾಜೀನಾಮೆಗೆ ಇದೀಗ ಒತ್ತಡ ಕೇಳಿ ಬಂದಿದೆ. ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ವಿರುದ್ಧ ಕೋಟಿ ಕೋಟಿ ಅವ್ಯವಹಾರದ ಆರೋಪವನ್ನ ಮಾಡಲಾಗಿದೆ. ವಿಧಾನಪರಿಷತ್ ಸದಸ್ಯ ಕೆ.ಎಸ್ ನವೀನ್ ಈ ಆರೋಪ ಮಾಡಿದ್ದು, ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಸಂತೋಷ್ ಲಾಡ್ ಅವರ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿ, ನೂರಾರು ಕೋಟಿ ಹಣವನ್ನು ಲೂಟಿ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಬರೀ ಆರೋಪವಲ್ಲ ಅದಕ್ಕೆ ಬೇಕಾದ ದಾಖಲೆಗಳು ಕೂಡ ಇದಾವೆ ಎಂದಿದ್ದಾರೆ. ಆ ದಾಖಲೆಗಳನ್ನ ಬಿಡುಗಡೆ ಕೂಡ ಮಾಡಿದ್ದಾರೆ.
ಕಾರ್ಮಿಕರ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಸುಳ್ಳು ತಪಾಸಣೆಯ ದಾಖಲೆಗಳನ್ನು ನೀಡಿದ್ದಾರೆ. ತಪಾಸಣೆ ನಡೆಸದೆ ಇಡೀ ರಾಜ್ಯದಿಂದ ಅಂದಾಜು 300 ಕೋಟಿಗಿಂತ ಹೆಚ್ಚು ಹಣವನ್ನು ಪಡೆದು ಸರ್ಕಾರ ಲೂಟಿ ಹೊಡೆದಿದೆ. 1982ನೇ ಇಸವಿಯಲ್ಲಿ ಹೆಸರಾಂತ ಸಿನಿಮಾ ಕಾರ್ಮಿಕ ಕಳ್ಳನಲ್ಲ ಬಿಡುಗಡೆಯಾಗಿತ್ತು. ಅದರಲ್ಲಿ ಮೇರು ನಟರಾದ ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ನಟಿಸಿದ್ದರು. ಶ್ರಮಜೀವಿ ಕಾರ್ಮಿಕನು ಕಳ್ಳನಾಗಿರುವುದಿಲ್ಲ ಎಂಬ ಸಂದೇಶ ಆ ಸಿನಿಮಾದಲ್ಲಿತ್ತು.

ಆದರೆ ಇಂದು ನಾವೂ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿರುವುದು ಏನು ಅಂದರೆ ಕಾರ್ಮಿಕ ಕಳ್ಳನಲ್ಲ. ಕಾರ್ಮಿಕ ಸಚಿವ ಕಳ್ಳನಾ..? ಕಟ್ಟಡ ಕಾರ್ಮಿಕರ ನಿಗಮಕ್ಕೆ ಸಾವಿರಾರು ಕೋಟಿ ಹಣವನ್ನು ಸೆಸ್ ಮೂಲಕ ಸಂಗ್ರಹ ಮಾಡಿ ಅದನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಕೆ ಮಾಡ್ತಾರೆ. ಈ ಯೋಜನೆಯಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಯುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ವರ್ಷ ಅವಧಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿರುವ ಮಾಹಿತಿಯಂತೆ 67 ಸಾವಿರ ಕಾರ್ಮಿಕರಿಗೆ ಒಟ್ಟು 19 ಕೋಟಿ 74 ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗಿದೆ ಎಂದು ಅರೋಪಿಸಿದರು.




