ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 05 : ಡಾ.ರಕ್ಷಿತ ಜಿ.ಪಿ.ಇವರು ಆ.10 ರಂದು ಭರತನಾಟ್ಯ ರಂಗ ಪ್ರವೇಶಿಸಲಿದ್ದಾರೆಂದು ಅಂಜನಾ ನೃತ್ಯ ಕಲಾ ಕೇಂದ್ರದ ವಿದುಷಿ ಡಾ. ನಂದಿನಿ ಶಿವಪ್ರಕಾಶ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕಾಶ್ಮೂರ್ತಿ ನಳಿನಾಕ್ಷಿ ದಂಪತಿಗಳ ಪುತ್ರಿ ಡಾ.ರಕ್ಷಿತ ಸಾಧನೆಯ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕಾಗಿ ಭರತನಾಟ್ಯ ರಂಗ ಪ್ರವೇಶಿಸಲಿದ್ದಾರೆ. ಉದಯೋನ್ಮುಖ ಕಲಾವಿದೆಯಾಗಲು ಭರತನಾಟ್ಯ ಕಲೆಯಲ್ಲಿ ತನ್ನನ್ನು ತೊಡಸಿಕೊಂಡಿದ್ದಾರೆ. ಪ್ರತಿನಿತ್ಯವೂ ಬೆಳಿಗ್ಗೆ 5-30 ರಿಂದ ಹಾಗೂ ಸಂಜೆ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ಸತತವಾಗಿ ಆರು ತಿಂಗಳ ಕಾಲ ತಾಲೀಮು ನಡೆಸಿ ಈಗ ರಂಗ ಪ್ರವೇಶಿಸುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಅಂದು ಸಂಜೆ ಐದು ಗಂಟೆಗೆ ಉಮಾಪತಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ ವಹಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಭರತನಾಟ್ಯ ಹಾಗೂ ಕೂಚುಪಡಿ ನರ್ತಕರಾದ ಡಾ.ವಸಂತಕಿರಣ್, ವಿದ್ವಾನ್ ಜಿ.ಎಸ್.ನಾಗೇಶ್, ಮಾಜಿ ಶಾಸಕ ಎ.ವಿ.ಉಮಾಪತಿ ಇವರುಗಳು ಭರತನಾಟ್ಯ ರಂಗ ಪ್ರವೇಶದಲ್ಲಿ ಭಾಗವಹಿಸಲಿದ್ದಾರೆಂದರು.
ಡಾ.ರಕ್ಷಿತ ಮಾತನಾಡಿ ಎಂಟನೆ ವಯಸ್ಸಿನಿಂದಲೆ ಭರತ ನಾಟ್ಯ ಕಲಿಯಲು ಆರಂಭಿಸಿದ ನಾನು ಮೊದಲು ಸುಧಾಮೂರ್ತಿಯವರ ಬಳಿ ಕಲಿತೆ. ನಂತರ ಅಂಜನಾ ನೃತ್ಯ ಕಲಾ ಕೇಂದ್ರದಲ್ಲಿ ಭರತ ನಾಟ್ಯ ಕಲಿತು ಈಗ ರಂಗ ಪ್ರವೇಶಿಸುತ್ತಿದ್ದೇನೆ. ಇದು ನನಗೆ ಜೀವನದ ಪಾಠ ಹೇಳಿಕೊಟ್ಟಿದೆ. ಗಂಗೂಬಾಯಿ ಹಾನಗಲ್ ಮೈಸೂರು ವಿವಿ.ಯಿಂದ ಭರತನಾಟ್ಯದ ಬಗ್ಗೆ ವಿದ್ವತ್ಪೂರ್ವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಿಕ್ಷಣ ಮತ್ತು ಭರತನಾಟ್ಯ ಎರಡನ್ನು ನಿಭಾಯಿಸಿದ್ದೇನೆಂದು ಹೆಮ್ಮೆಯಿಂದ ಹೇಳಿದರು.
ವಿದ್ವಾನ್ ಸಿ.ಆರ್.ಶಿವಪ್ರಕಾಶ್, ಪ್ರಕಾಶ್ಮೂರ್ತಿ, ನಳಿನಾಕ್ಷಿ ದಂಪತಿಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.




