ಸುದ್ದಿಒನ್, ಹಿರಿಯೂರು. ಏಪ್ರಿಲ್. 26 : ರಾಜ್ ಕುಮಾರ್, ಶಂಕರ ನಾಗ್ ಮತ್ತು ಪುನೀತ್ ರಾಜ್ ಕುಮಾರ್ ಕರ್ನಾಟಕ ಕಲಾ ಶ್ರೀಮಂತಿಕೆಯ ಅಸ್ಮಿತೆ ಎಂದು ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಹೇಳಿದರು.
ಹಿರಿಯೂರು ನಗರದ ರೋಟರಿ ಸಭಾ ಭವನದಲ್ಲಿ ಶನಿವಾರ ದಿ. ಶಂಕರ್ ನಾಗ್ ಅಭಿಮಾನಿಗಳಕಲಾ ವೇದಿಕೆ ವತಿಯಿಂದ ಆಯೋಜಿಸಿದ್ದ ರಾಜ್ ಕುಮಾರ್ ಅವರ 97 ನೇ, ಪುನಿತ್ ರಾಜ್ ಕುಮಾರ್ ಅವರ 51 ನೇ ಹುಟ್ಟು ಹಬ್ಬ, ಕವಿಗೋಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.

ಕಲಾವಿದರ ಬದುಕಿನ ಜೊತೆಗೆ, ನಾಡಿನ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ರಾಜ್ ಕುಮಾರ ಅವರಿಗೆ ಸಲ್ಲುತ್ತದೆ. ಕೌಟುಂಬಿಕ ಮತ್ತು ಮಾನವೀಯ ಚಿತ್ರಗಳ ಮೂಲಕ ಸಮಾಜಕ್ಕೆ ಮಾದರಿಯಾಗಿ ಉಳಿದುಕೊಂಡಿದ್ದಾರೆ. ನಾಡಿನ ಕವಿ,ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅಗತ್ಯ ಇದೆ. ವ್ಯವಹಾರಿಕ ಬದುಕಿನಲ್ಲಿ ಕಲೆ, ಸಂಸ್ಕೃತಿ ಬೆಳೆಸುವ ಕಲಾವಿದರು ಸಾಧಕರಾಗಿ ಉಳಿಯುತ್ತಾರೆ ಎಂದು ಹೇಳಿದರು.
ಕವಿಗೋಷ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ, ಬರಹಗಾರನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು.ವರ್ತಮಾನದ ತಲ್ಲಣಗಳಿಗೆ ಗಟ್ಟಿ ದನಿ ಆಗಬೇಕು. ಸಾಮಾನ್ಯ ಜನರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿರುವ ಬಿಕ್ಕಟ್ಟುಗಳ ಬಗ್ಗೆ ಕಳಕಳಿ ಇರಬೇಕು. ಪ್ರಜಾಪ್ರಭುತ್ವ ಅಧಿಕಾರವನ್ನು ಸ್ವಾರ್ಥಕ್ಕೆ ಬಳಕೆ ಮಾಡುವ ರಾಜಕಾರಣ ವಿರುದ್ದ ಬರಹ ಬಲಗೊಳ್ಳಬೇಕು. ಸಮಾಜದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಶಿಕ್ಷಣ ವ್ಯಪಾರೀಕರಣ ಕುರಿತು ಬೆಳಕು ಚೆಲ್ಲುವ ಸಾಹಿತ್ಯ ರಚನೆ ಆಗಬೇಕು. ಬಯಲು ಸೀಮೆಯ ಜನ ಜೀವನ ಮತ್ತು ಇಲ್ಲಿನ ಸಂಕಷ್ಟದ ಪರಿಸ್ಥಿತಿಗಳನ್ನು ದಾಖಲು ಮಾಡುವ ಒಳಗಣ್ಣಿನ ಚೈತನ್ಯ ಕವಿಗೆ ಇರಬೇಕು ಎಂದು ಕಿವಿ ಮಾತು ಹೇಳಿದರು.
ಕಲಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಚ್.ಸಿ. ದಿವು ಶಂಕರ್ ಮಾತನಾಡಿ, ಕಲಾ ಸಂಘಟಿತ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಪ್ರೋತ್ಸಾಹ ಸಿಗಬೇಕು. ಸುಮಾರು ಮೂರು ದಶಕಗಳಿಂದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕಲಾ ವೇದಿಕೆಗೆ ನಿವೇಶನ ಮತ್ತು ಒಂದ ಕಟ್ಟಡ ಸೌಕರ್ಯ ಆಗಬೇಕು ಎಂದು ಮನವಿ ಮಾಡಿದರು.

ಶೈಲಜಾ ಬಾಬು, ನಿರ್ಮಾಲ ಭಾರದ್ವಾಜ್, ರಶ್ಮಿ, ಉಷಾರಾಣಿ,ಬಿಜಿಕೆರೆ ಶ್ರೀರಾಮಲು, ಬಬ್ಬೂರು ತಿಪ್ಪಿರನಾಯಕ, ಇಂಗಳದಾಳ್ ತಿಮ್ಮಯ್ಯ, ಪಿಲ್ಲಹಳ್ಳಿ ಚಿತ್ರಲಿಂಗಪ್ಪ, ಕ್ಲಾಸಿಕ್ ಚಂದ್ರಶೇಖರ್, ಹೊನ್ನೂರಾಲಿ, ಲೋಕೇಶ್ ಪಲ್ಲವಿ, ಪಂಡರಹಳ್ಳಿ ಶಿವರುದ್ರಪ್ಪ, ಸತೀಶ್ ಕುಮಾರ, ಭಾಗ್ಯಮ್ಮ, ರಮೇಶ್ ಮತ್ತಿತರರು ಕವಿಗೋಷ್ಟಿಯಲ್ಲಿ ಕವಿತೆಗಳನ್ನು ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಪರಶುರಾಮ ಗೊರಪ್ಪರ್, ಡಾ. ಮಂಜುಳಾ, ರೈತ ಮುಖಂಡ ಜಯಣ್ಣ, ಜೂನಿಯರ್ ರಾಜ್ ಕುಮಾರ್ ಎಲ್ಲೇಶ್,ಇ. ರಂಗಸ್ವಾಮಿ,ಎಂ.ಬಿ. ಲಿಂಗಪ್ಪ, ಎಚ್. ಸಿದ್ದೇಶ್, ಶ್ರೀನಿವಾಸ್, ವಿನೋದ್ ಕುಮಾರ,ದಾನಪ್ಪ, ನಟರಾಜ್ ಇದ್ದರು.


















