ಚಿತ್ರದುರ್ಗ: ಅತ್ಯಾಚಾರ ಕೇಸಲ್ಲಿ ನಿನ್ನೆಯಷ್ಟೇ ಪ್ರಜ್ವಲ್ ರೇವಣಣಗೆ ಜೀವಾವಧಿ ಶಿಕ್ಷೆ ಆಗಿದೆ. ಈ ಸಂಬಂಧ ಸಹೋದರ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್ ತೀರ್ಪಿಗೆ ಯಾರೇ ಆಗಲಿ ತಲೆ ಬಾಗಬೇಕು ಎಂದಿದ್ದಾರೆ.
ಹಿರಿಯೂರು ಬಳಿಯ ಮಸ್ಕಲ್ ಬಳಿ ಮಾತನಾಡಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆಯಾಗಿದೆ. ಯಾರೇ ಆಗಲಿ ಕೋರ್ಟ್ ತೀರ್ಪಿಗೆ ತಲೆಬಾಗಲೇಬೇಕು. ಈಗ ಕೋರ್ಟ್ ತೀರ್ಪಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿಲ್ಲ. ಈ ಮೊದಲು ಪ್ರಜ್ವಲ್ ರೇವಣ್ಣ ಅವರ ಮೇಲೆ ಆರೋಪಗಳು ಇದ್ದಾಗ ಜೆಡಿಎಸ್ ಪಕ್ಷ ಅವರನ್ನ ಅಮಾನತು ಮಾಡಿತ್ತು. ಆಗಿನ್ನು ಅಪರಾಧಿಯೋ, ಅಲ್ಲವೋ ಎಂಬ ತೀರ್ಪು ಬಂದಿರಲಿಲ್ಲ. ವರಿಷ್ಠರ ತೀರ್ಮಾನದ ಸ್ಪಷ್ಟನೆ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ವಿಷಯದ ಬಗ್ಗೆ ಇದಕ್ಕಿಂತ ಹೆಚ್ಚಾಗಿ ನಾನು ಪ್ರತಿಕ್ರಿಯಿಸುವುದಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಮಾಡಿದ ಕೇಸ್ ಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರನ್ನ ಅರೆಸ್ಟ್ ಮಾಡಲಾಗಿತ್ತು. ಕೋರ್ಟ್ ನಲ್ಲಿ ಎಲ್ಲಾ ರೀತಿಯ ಸಾಕ್ಷ್ಯಾಧಾರಗಳನ್ನು ಒದಗಿಸಿದ ಕಾರಣ ನ್ಯಾಯಾಲಯದಿಂದ ಸರಿಯಾದ ತೀರ್ಪು ಬಂದಿದೆ. ಹಾಸನ ಸೇರಿದಂತೆ ಎಲ್ಲಾ ಹೆಣ್ಣು ಮಕ್ಕಳಿಗೂ ಇದು ಖುಷಿ ಕೊಟ್ಟಂತ ವಿಚಾರವಾಗಿದೆ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರಾಗಲಿ, ಜೆಡಿಎಸ್ ನಾಯಕರಾಗಲಿ ಪ್ರಜ್ವಲ್ ರೇವಣ್ಣ ವಿಚಾರಕ್ಕೆ ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ ಎಂದೇ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ರೇವಣ್ಣ ಹಾಗೂ ಭವಾನಿ ಅವರಿಗೆ ಇದೊಂದು ಶಾಕ್ ಆದಂತ ವಿಚಾರವೇ ಆಗಿದೆ. ಮಗ ಈ ಬಾರಿ ಹೊರಗೆ ಬರಬಹುದು ಎಂದುಕೊಂಡಿದ್ದ ಪೋಷಕರಿಗೆ ಮಗನ ಜೀವಾವಧಿ ಶಿಕ್ಷೆ ಕೇಳಿ ದಂಗಾಗಿ ಹೋಗಿದ್ದಾರೆ.






