ನಮ್ಮೂರ ದೇಗುಲ : ದಾವಣಗೆರೆ : ಕೊಣಚಗಲ್ ಶ್ರೀ ರಂಗನಾಥಸ್ವಾಮಿ ಬೆಟ್ಟದ ಪರಿಚಯ

3 Min Read

ವಿಶೇಷ ಲೇಖನ
ಡಾ ಕೆ ವಿ ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ , ಮೊ : 9342466936

 

ಕೊಣಚಗಲ್ ಶ್ರೀ ರಂಗನಾಥಸ್ವಾಮಿ ಬೆಟ್ಟವು ಗುತ್ತಿದುರ್ಗ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ ವಾಯುವ್ಯಕ್ಕೆ 37 ಕಿಲೋಮೀಟರ್ ದೂರದಲ್ಲಿದೆ.(ಜಗಳೂರಿನಿಂದ 13 ಕಿ.ಮೀ.) ಚಿತ್ರದುರ್ಗ- ಯಳಗೋಡು-ಬಿದರಕೆರೆ – ರಸ್ತೆಮಾಕುಂಟೆ ಮಾರ್ಗದಲ್ಲಿ ಕೊಣಚಗಲ್ ಗೇಟ್ ನಿಂದ ಪಶ್ಚಿಮದಲ್ಲಿ 2 ಕಿ.ಮೀ.ದೂರದಲ್ಲಿದೆ.
ಕೊಣಚ ಎಂದರೆ ಸಣ್ಣ ಬಂಡೆಕಲ್ಲುಗಳು. ಇದರ ರಾಶಿಯ ಕಲ್ಲುಬೆಟ್ಟವೇ ಕೊಣಚಗಲ್ ಆಗಿದೆ. ಇಲ್ಲಿ ಯಾವುದೇ ಊರು,ಗ್ರಾಮವಿಲ್ಲ. ಆದರೆ ಕೇವಲ ಬೆಟ್ಟವಿದೆ. ಬೆಟ್ಟದ ಕೆಳಗೆ ಅಕ್ಕಪಕ್ಕದಲ್ಲಿ ಸಂತೆಮುದ್ದಾಪುರ, ಕೊರಟಿಕೆರೆ, ಗುತ್ತಿದುರ್ಗ, ಬಿಸ್ತುವಳ್ಳಿ, ರಸ್ತೆಮಾಕುಂಟೆ,ದೇವಿಗೆರೆ,ಸೋಮೇನಹಳ್ಳಿ.. ಗ್ರಾಮಗಳಿವೆ.ಇಲ್ಲಿನ ಬಹಳಷ್ಟು ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ. ಇಲ್ಲಿಯೇ ಹೊರಸಂಚಾರ, ಹೊರಬೀಡು,ಪರೇವು ಆಚರಣೆ, ಸಣ್ಣಪ್ರಮಾಣದ ಶುಭ ಸಮಾರಂಭಗಳು ,ಪ್ರಸಾದ, ದಾಸೋಹ ಸೇವೆಗಳು ಸದಾಕಾಲ ನಡೆಯುತ್ತಲೇ ಇರುತ್ತವೆ.ಶನಿವಾರ ಈ ದೇವರ ವಾರವಾಗಿದ್ದು ಹತ್ತಾರು ಊರುಗಳಿಂದ ಭಕ್ತರು ಆಗಮಿಸುತ್ತಾರೆ.

 

ಗುಡ್ಡದ ತಪ್ಪಲಿನ ಜಾಗ:
ಗುಡ್ಡದ ಪ್ರಾರಂಭದ ಭಾಗವಾಗಿರುವ ಇಲ್ಲಿ ವಿಶಾಲ ಬಯಲಿದೆ.
ಸುಂದರವಾದ ಪರಿಸರ, ಕುರುಚಲು ಕಾಡು,ಹಕ್ಕಿಪಕ್ಷಿಗಳ ಇಂಚರ, ವಿಶ್ರಮಿಸಲು ಬೃಹತ್ ಆಲದ ಮರ, ಅಲ್ಲಲ್ಲಿ ಮಂಟಪಗಳು,ಹೊಂಡ, ಚಾವಡಿ ಮಂಟಪವಿದೆ.
ಚಾವಡಿ ಮಂಟಪವು ಪೂರ್ವಾಭಿಮುಖವಾಗಿ 17-18 ನೇ ಶತಮಾನದ ನಿರ್ಮಿಸಲಾಗಿದೆ. ಸಭಾಮಂಟಪ ಹಾಗೂ ಗರ್ಭಗುಡಿ ಇದೆ.ಆದರೆ ಗರ್ಭಗೃಹದಲ್ಲಿ ಯಾವುದೇ ವಿಗ್ರಹವಿಲ್ಲ.

ಸಭಾಮಂಟಪದಲ್ಲಿ 4 ಕಂಬಗಳಿದ್ದು, ಉಬ್ಬು ಕೆತ್ತನೆಗಳಿವೆ.3 ಮುಖದ ಹಸು,ಬಸವ,ಆಮೆ,ಕಮಲ,ಸಿಂಹ… ಮುಂತಾದ ರಚನೆಗಳಿವೆ.ಹೊರಗೋಡೆಯ ಭಿತ್ತಿಯಲ್ಲಿ ನಾಗರಹಾವು, ಮೀನುಗಳ.. ಕೆತ್ತನೆಗಳಿವೆ. ಈ ಚಾವಡಿ ಮಂಟಪದಲ್ಲಿ ಜಾತ್ರೆಯ ಸಮಯದಲ್ಲಿ ದೇವರುಗಳು ಬಂದು ಕೂರುತ್ತವೆ.

ಇದರ ಹತ್ತಿರದಲ್ಲಿ ಊರುಕೊಂಡಪ್ಪ,ಭೂತಪ್ಪ, ಆಂಜನೇಯ ಸ್ವಾಮಿ ಗುಡಿಗಳಿವೆ. ತಪ್ಪಲಿನ ಬಯಲಿನಲ್ಲಿ ಐತಿಹಾಸಿಕ ದಳವಾಯಿ ಮುದ್ದಣನ ಹೊಂಡವಿದೆ.ಇದರ ಹತ್ತಿರದಲ್ಲೇ ಮತ್ತೊಂದು ಸಣ್ಣ ಹೊಂಡವಿದೆ. ಪ್ರತಿ ವರ್ಷ ಯುಗಾದಿಯ ನಂತರ ಈ ತಪ್ಪಲಿನ ಜಾಗದಲ್ಲಿ ಜಾತ್ರೆ ನಡೆಯುತ್ತದೆ .
ಆಗ ಬ್ರಹ್ಮರಥೋತ್ಸವ, ಕೀರ್ತನೆ ,ಭಜನೆ ಮುಂತಾದ ಧಾರ್ಮಿಕ ಆಚರಣೆಗಳು ನಡೆಯುತ್ತವೆ.

ಗುಡ್ಡದ ಮೇಲಿನ ದೇವಾಲಯ:
ದೇವಾಲಯ ತಲುಪಲು ಇತ್ತೀಚಿನವರೆಗೂ ಮೆಟ್ಟಿಲುಗಳು ಮಾತ್ರವೇ ಇದ್ದಿತ್ತು. ಆದರೆ ಕೆಲದಿನಗಳ ಹಿಂದೆ ಇಲ್ಲಿ ಪಕ್ಕದಲ್ಲಿ ಸುಸಜ್ಜಿತ ರಸ್ತೆ ಮಾಡಲಾಗಿದ್ದು ,ಬೆಟ್ಟದ ಮೇಲಿನ ದೇವಾಲಯದವರೆಗೂ ವಾಹನದಲ್ಲಿ ತೆರಳಬಹುದಾಗಿದೆ.

ಬೆಟ್ಟದ ಮೇಲಿನ ಬಯಲನ್ನು ಬಳಸಿಕೊಂಡು ಕಟ್ಟಲಾದ ಸುಂದರವಾದ ಶ್ರೀ ರಂಗನಾಥಸ್ವಾಮಿ ದೇವಾಲಯ ಇದಾಗಿದೆ .
ಈ ದೇವಾಲಯವು ಗರ್ಭಗೃಹ ,ಅಂತರಾಳ, ನವರಂಗ , ಮಹಾಮಂಟಪ ,ಮುಖಮಂಟಪ ಹಾಗೂ ದೀಪಸ್ತಂಭಗಳನ್ನು ಒಳಗೊಂಡಿದೆ .
ನೈಸರ್ಗಿಕ ಗುಹೆಯನ್ನು ಬಳಸಿಕೊಂಡು ಅದರಲ್ಲಿರುವ ಉದ್ಭವಮೂರ್ತಿ (ಗುಂಡುಕಲ್ಲನ್ನು) ರಂಗನಾಥಸ್ವಾಮಿಯ ರೂಪವೆಂದು ಆರಾಧಿಸಲಾಗುತ್ತದೆ. ಮೂರ್ತಿಗೆ ಬೆಳ್ಳಿಯ ಪ್ರತಿಮೆಯನ್ನು ತೊಡಿಸಿ ಪೂಜಿಸುತ್ತಿರುವರು .
ಈ ದೇವರ ಮುಂಭಾಗದಲ್ಲಿ ಸಿಮೆಂಟಿನಿಂದ ನಿರ್ಮಿಸಲಾದ ಸಿಂಹ, ಮೂರು ಅಡಿ ಎತ್ತರದ ಲಕ್ಕಮ್ಮ ಹಾಗೂ ತುಳಸಮ್ಮ ಶಿಲ್ಪಗಳನ್ನು ಮೂರ್ತಿಯ ಅಕ್ಕಪಕ್ಕದಲ್ಲಿ ಇಟ್ಟಿದ್ದಾರೆ .
ಬಲಭಾಗದ ಚಿಕ್ಕ ಗೂಡಿನಲ್ಲಿ ಲಕ್ಕಮ್ಮ ದೇವಿಯ ಉದ್ಭವಮೂರ್ತಿಯಿದೆ. ಶ್ರೀರಂಗನಾಥಸ್ವಾಮಿಯ ದೇವಾಲಯದ ಉದ್ಭವಮೂರ್ತಿ ಒಂದೂವರೆ ಅಡಿ ಎತ್ತರವಿದೆ.

ಗರ್ಭಗೃಹದ ಲಲಾಟದಲ್ಲಿ ಗಜಲಕ್ಷ್ಮಿ ,ಇಕ್ಕೆಲಗಳಲ್ಲಿ ವೈಷ್ಣವ ದ್ವಾರಪಾಲಕರು ಹಾಗೂ ಹೂಬಳ್ಳಿ ಶಾಖೆಗಳನ್ನು ಚಿತ್ರಿಸಲಾಗಿದೆ.ಲಲಾಟದ ಮೇಲೆ ವಿಷ್ಣುವಿನ ಅವತಾರಗಳನ್ನು ರಚಿಸಲಾಗಿದೆ. ನವರಂಗದಲ್ಲಿ ಉತ್ಸವ ಮೂರ್ತಿಗಳನ್ನು ಇಡಲಾಗಿದೆ. ಭೂತಪ್ಪ ,ಆನೆ ವಾಹನ, ಗರುಡವಾಹನ, ಆಂಜನೇಯ ವಾಹನದ ಉತ್ಸವ ಮೂರ್ತಿಗಳಿವೆ. ನವರಂಗದಲ್ಲಿ ನಾಲ್ಕು ಚಿತ್ರಕಾಂಡ ಕಂಬಗಳಿವೆ. ನವರಂಗಕ್ಕೆ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ದ್ವಾರಬಾಗಿಲುಗಳಿವೆ. ಮಹಾಮಂಟಪದಲ್ಲಿ ಬಹುಮುಖಗಳಲ್ಲಿ ಕಡೆಯಲಾದ 8 ಕಂಬಗಳಿವೆ. ಸಭಾಮಂಟಪದಲ್ಲಿ ನಾಲ್ಕು ಕಂಬಗಳಿವೆ .ಇವುಗಳನ್ನು ಬಹುಮುಖಗಳಲ್ಲಿ ಕಡೆದಿದ್ದಾರೆ .
ಗರ್ಭಗೃಹದ ಮೇಲೆ ಬೃಹತ್ ಬಂಡೆಗಲ್ಲನ್ನು ಬಳಸಿ ಅದರ ಮೇಲೆ ಚಿಕ್ಕ ಶಿಖರವನ್ನು ನಿರ್ಮಿಸಿರುವರು. ಹೊರಭಿತ್ತಿಯ ಮೇಲೆ ಮಿಥುನ ಶಿಲ್ಪಗಳು, ಕಾದಾಡುತ್ತಿರುವ ಆನೆಗಳು, ಮೀನು ಮತ್ತು ನಂದಿಯ ಉಬ್ಬುಕೆತ್ತನೆಗಳಿವೆ.
ದೇವಾಲಯದ ಮುಂದೆ 15 ಅಡಿ ಎತ್ತರದ ದೀಪಸ್ತಂಭವನ್ನು ನಿರ್ಮಿಸಲಾಗಿದೆ.

ದೇವಾಲಯದ ಆಸುಪಾಸಿನಲ್ಲಿ ಲಕ್ಷ್ಮಿ,ಕಂಪಳ ಮಾರಮ್ಮ,ಪಾದಗಟ್ಟೆ, ಮುಷ್ಟೂರು ಮಠಗಳಿವೆ.
ದೇವಾಲಯದ ಹೊರಭಾಗದಲ್ಲಿ ನಿಂತು ನೋಡಿದರೆ ಸುತ್ತಮುತ್ತಲಿನ ಹತ್ತಾರು ಕಿಲೋಮೀಟರ್ ದೂರದ ಪ್ರದೇಶಗಳನ್ನು, ಗ್ರಾಮಗಳು ಬಲು ಸುಂದರವಾಗಿ ಕಾಣುತ್ತದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks