ನಮ್ಮೂರ ದೇಗುಲ : ಹೊಳಲ್ಕೆರೆ ರಂಗಯ್ಯನದುರ್ಗ ಕಾವಲಿನ ಜಾನೇ ರಂಗನಾಥ ಸ್ವಾಮಿ ಬೆಟ್ಟದ ಪರಿಚಯ

3 Min Read

ವಿಶೇಷ ಲೇಖನ
ಡಾ ಕೆ ವಿ ಸಂತೋಷ್, ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ, ಮೊ : 93424 66936

ಸುದ್ದಿಒನ್ : ಸಿಂಗೇನಹಳ್ಳಿ ಗ್ರಾಮದಿಂದ ನಾಲ್ಕು ಕಿಲೋಮೀಟರ್ ದೂರ ಉತ್ತರಕ್ಕೆ ರಾಮಗಿರಿ ರಸ್ತೆಯಲ್ಲಿರುವ ಜಾನೇರಂಗನಾಥಸ್ವಾಮಿ ಬೆಟ್ಟವು ಮೂಲತಃ ಗಿರಿದುರ್ಗವಾಗಿದ್ದು, 17-18 ನೇ ಶತಮಾನದಲ್ಲಿ ಪಾಳೇಯಗಾರರು ಇಲ್ಲಿ ಕೋಟೆಯನ್ನು ನಿರ್ಮಿಸಿದ್ದರು.

1720 ರಲ್ಲಿ ಮರಾಠರ ಸೇನಾಧಿಪತಿ
ಸಿದ್ದೋಜಿರಾವ್ ಈ ಗಿರಿದುರ್ಗವನ್ನು ಅತಿಕ್ರಮಿಸಿಕೊಂಡು ಇದನ್ನು ಕೆಲಕಾಲ ತನ್ಮ ಠಾಣ್ಯ ಮಾಡಿಕೊಂಡಿರುತ್ತಾನೆ.
ಇದನ್ನು ಅರಿತ ಚಿತ್ರದುರ್ಗದ ದೊರೆ ಬಿಚ್ಚುಗತ್ತಿ ಭರಮಣ್ಣ ನಾಯಕನು ಇಲ್ಲಿಗೆ ದಾಳಿ ಮಾಡಿ ಕೋಟೆಯನ್ನು ಮರುವಶಪಡಿಸಿಕೊಳ್ಳುತ್ತಾನೆ ಹಾಗೂ ಜೊತೆಗೆ ಸಿಂಗೇನಹಳ್ಳಿ,ಕೆಂಚಾಪುರ ತುಪ್ಪದಹಳ್ಳಿ..ಗ್ರಾಮವನ್ನು ಚಿತ್ರದುರ್ಗ ಸಂಸ್ಥಾನಕ್ಕೆ ಸೇರಿಸಿಕೊಳ್ಳುತ್ತಾನೆ.
ಆನಂತರ ತಮ್ಮ ಮನೆದೇವರಾದ ನೀರ್ಥಡಿ ರಂಗನಾಥಸ್ವಾಮಿಯ ಹೆಸರಿನ ಮೇಲೆ ಇದಕ್ಕೆ ರಂಗಯ್ಯನದುರ್ಗ ಕಾವಲು ಎಂದು ಹೆಸರಿಡುತ್ತಾನೆ.
ಈ ಬೆಟ್ಟದ ಕೆಳಭಾಗದಲ್ಲಿ ಹಿಂದೆ ಜನವಸತಿ ಪ್ರದೇಶ ಇದ್ದವೆಂದು ಹೇಳಲಾಗುತ್ತದೆ. ಆದರೆ ಇಂದು ಇಲ್ಲಿ ಯಾವುದೇ ಜನವಸತಿ ಪ್ರದೇಶಗಳು ಕಂಡುಬರುವುದಿಲ್ಲ.

ಕೋಟೆ* :
ಇಲ್ಲಿ ಪಾಳೆಗಾರರ ಕಾಲದಲ್ಲಿ ನಿರ್ಮಿಸಲಾದ ಕಾವಲು ಗೋಪುರಗಳು, ಬುರುಜುಗಳು, ದ್ವಾರಬಾಗಿಲು, ಕೋಟೆಗೋಡೆಗಳು… ಇಂದಿಗೂ ಕಂಡುಬರುತ್ತವೆ.
ಹೊಳಲ್ಕೆರೆ ತಾಲೂಕಿನ ಎರಡನೇ ಅತ್ಯಂತ ಎತ್ತರದ ಪ್ರದೇಶವಾದ ಇಲ್ಲಿನ ಜಾಗದಿಂದ ನಿಂತು ನೋಡಿದರೆ ಸುತ್ತಮುತ್ತಲ ಐವತ್ತು ಕಿಲೋಮೀಟರ್ ದೂರದ ಪ್ರದೇಶಗಳನ್ನು ಬರಿಗಣ್ಣಿಗೆ ಗೋಚರವಾಗುತ್ತದೆ. ಇಂದು ಮೂರು ಜಿಲ್ಲೆಗಳ (ಚಿತ್ರದುರ್ಗ- ದಾವಣಗೆರೆ- ಚಿಕ್ಕಮಗಳೂರು.)ಆಯಕಟ್ಟಿನ ಸ್ಥಳದಲ್ಲಿರುವ ಈ ಪ್ರದೇಶವು ಹಿಂದೆಯೂ ಗಡಿ ಕಾವಲಿಗೆ ಹಾಗೂ ಸೇನಾ ಕಣ್ಗಾವಲಿಗೆ ಪ್ರಶಸ್ತವಾದ ಸ್ಥಳವಾಗಿದ್ದರಿಂದಲೇ ಇಲ್ಲಿ ಗಡಿಕೋಟೆ ನಿರ್ಮಿಸಲಾಗಿತ್ತು.

ಮುಖ್ಯರಸ್ತೆಯಿಂದ ಮೂರು ಕಿಲೋಮೀಟರ್ ಕಾಲುಹಾದಿಯಲ್ಲಿ ಈ ಕೋಟೆ ತಲುಪಲು ಸಾಗಬೇಕು.
ಹಿಂದೆ ಇದನ್ನು ತಲುಪಲು ನಾಲ್ಕು ಕಡೆಗಳಿಂದ ರಸ್ತೆಗಳಿದ್ದವು.
ಇಂದು ಒಂದು ಕಡೆಯ ರಸ್ತೆ ಮಾತ್ರ ಬಳಕೆಯಲ್ಲಿದೆ.
ಕೋಟೆ ಗೋಡೆಗಳು ಮೂರು ಸುತ್ತಿನದಾಗಿದ್ದು ಅಗಸೆಬಾಗಿಲು ಹೊಂದಿತ್ತು.

ಅಗಸೆಬಾಗಿಲು ದಕ್ಷಿಣಕ್ಕೆ ಮುಖ ಮಾಡಿದ್ದು ಅದರ ಹೊರಭಾಗದಲ್ಲಿ ಆಂಜನೇಯ ಸ್ವಾಮಿ ಗುಡಿಯಿದೆ.ಇದು 16- 17 ನೇ ಶತಮಾನದ ಪಾಳೇಗಾರರ ಕಾಲದ ಶಿಲ್ಪವಾಗಿದೆ.ಇಂದು ಅಗಸೆಬಾಗಿಲಿನ ಒಂದು ಭಾಗ ಮಾತ್ರ ಉಳಿದಿದೆ. ಕೋಟೆಯ ಸುತ್ತು ಗೋಡೆಗಳು ಶೇಕಡಾ 70ರಷ್ಟು ನಾಮಾವಶೇಷವಾಗಿವೆ. ಇದು ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸಲು ನಿರ್ಮಿಸಲಾದ ಕೋಟೆಯಾಗಿತ್ತು. ಕೋಟೆಯ ಹತ್ತಾರು ದಿಕ್ಕುಗಳಲ್ಲಿ ನೈಸರ್ಗಿಕ ದೊಣೆಗಳಿದ್ದು ಸದಾಕಾಲ ನೀರು ಶೇಖರಣೆಯಾಗುವಂತೆ, ಜಲ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು ಇಂದಿಗೂ ಕೆಲವು ಬಳಕೆಯಲ್ಲಿವೆ.
ಕೋಟೆ ಹತ್ತಲು ಮೇಲ್ಭಾಗದವರೆಗೂ ಸುಲಭವಾದ ಮೆಟ್ಟಿಲುಗಳನ್ನು ಮಾಡಲಾಗಿದೆ.

ಕೋಟೆಯ ಮೇಲ್ಭಾಗದಲ್ಲಿ ಶ್ರೀ ಜಾನೇರಂಗನಾಥ ಸ್ವಾಮಿದೇವರ ಉದ್ಭವಮೂರ್ತಿ ಇರುವ ದೇವಾಲಯವಿದೆ.
ಇದಕ್ಕೆ 17ನೇ ಶತಮಾನದಲ್ಲಿ ಸ್ಥಳೀಯವಾಗಿ ಸಿಗುವ ಕಲ್ಲುಗಳನ್ನು ಬಳಸಿ ಪುಟ್ಟ ಗುಡಿಯನ್ನು ನಿರ್ಮಿಸಲಾಗಿದೆ.ಗರ್ಭಗೃಹ, ಅಂತರಾಳ, ಸಭಾಮಂಟಪಗಳನ್ನು ಇದು ಹೊಂದಿದೆ.ಗರ್ಭಗೃಹದಲ್ಲಿ ಶ್ರೀ ಜಾನೇರಂಗನಾಥ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಸಭಾಮಂಟಪದಲ್ಲಿ ವೈಷ್ಣವ ದ್ವಾರಪಾಲಕರ ಶಿಲ್ಪಗಳನ್ನು ಕಾಣಬಹುದು. ದೇವಾಲಯದ ಮುಂಭಾಗದಲ್ಲಿ ದೀಪಸ್ತಂಭವಿದ್ದು,ಇದರಲ್ಲಿ ಪಾಳೆಗಾರರ ಭಕ್ತ ಶಿಲ್ಪಗಳನ್ನು ಕೆತ್ತಲಾಗಿದೆ. ಈ ದೇವಾಲಯದ ಹಿಂಭಾಗ ಹಾಗೂ ಮುಂಭಾಗದಲ್ಲಿ ಬುರುಜುಗಳಿವೆ. ದೇವಾಲಯದ ಕೆಳಭಾಗದಲ್ಲಿ ಬಂದ ಭಕ್ತರಿಗೆ ಅನ್ನಪೂರ್ಣ ಭೋಜನಾಲಯ ಹಾಗೂ ನೆರಳು -ನೀರಿನ ವ್ಯವಸ್ಥೆ ಇದೆ. ಇದರ ಬಳಿಯಲ್ಲಿಯೇ ನೈಸರ್ಗಿಕ ಸಣ್ಣ ಹೊಂಡವಿದ್ದು,ಇದು ಎಂತಹ ಬರಗಾಲದಲ್ಲೂ ಬರುವುದಿಲ್ಲ ಎಂದು ಹೇಳಲಾಗುತ್ತದೆ.

ಆಗಾಗ ಇಲ್ಲಿ ಶುಭ ಸಮಾರಂಭಗಳು ಜರುಗುತ್ತವೆ.
ಶನಿವಾರ ಹಾಗೂ ಶ್ರಾವಣ ಮಾಸದ ದಿನಗಳಂದು ನೂರಾರು ಭಕ್ತರಿಂದ ಈ ದೇವಾಲಯ ತುಂಬಿ ತುಳುಕುತ್ತದೆ.
ನೂರಾರು ಕುಟುಂಬಗಳು ಸುತ್ತಮುತ್ತಲ ತಾಲೂಕು,ಜಿಲ್ಲೆಗಳಿಂದಲೂ ಈ ಮಂದಿರಕ್ಕೆ ಭೇಟಿ ನೀಡುತ್ತಾರೆ.

ಜೇನುಹುಳದ ವೈಶಿಷ್ಟತೆ : ಮೂಲತಃ ಇದು
ಜೇನುರಂಗನಾಥವಾಗಿದ್ದು,ಮುಂದುವರಿದು ಜಾನೇರಂಗನಾಥವಾಗಿದೆ. ದೇವಸ್ಥಾನವಿರುವ ಬೆಟ್ಟದ ಪಶ್ಚಿಮಕ್ಕೆ ನೂರಾರು ಹೆಜ್ಜೇನು ಗೂಡುಗಳಿದ್ದು, ಇವು ಶತಮಾನಗಳಿಂದಲೂ ಇದೇ ರೀತಿ ಇರುವ ಬಗ್ಗೆ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಈ ಜೇನುಗೂಡು ಗಳಿಂದಲೇ ಇದಕ್ಕೆ ಜೇನುರಂಗನಾಥ ಹೆಸರು ಬಂದಿದೆ.
ಯಾರೇ ತಪ್ಪು ಮಾಡಿದರೂ, ಕೆಟ್ಟ ಆಲೋಚನೆಗಳಿಂದ ದೇವಾಲಯಕ್ಕೆ ಬಂದರೆ ಅವರಿಗೆ ಜೇನುಹುಳಗಳಿಂದ ಕಾಟ ತಪ್ಪುವುದಿಲ್ಲ ಎಂಬುದು ಭಕ್ತರ ಅನಿಸಿಕೆಯಾಗಿದೆ.

ಮಳೆ ದೇವರು :
ಮಳೆಗಾಲ ತಡವಾದರೆ/ ಮಳೆ ಬಾರದಿದ್ದರೆ, ಬರಗಾಲ ಆವರಿಸಿದಾಗ… ಸುತ್ತಮುತ್ತಲ ಗ್ರಾಮದ ದೇವರುಗಳನ್ನು ಇಲ್ಲಿಗೆ ಕರೆತಂದು ಪೂಜೆ ಹಾಗೂ ಪರೇವು ಆಚರಣೆ ಮಾಡಲಾಗುತ್ತದೆ. ನಂತರ ಮಳೆ ಬರುವುದೆಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ನಿಸರ್ಗ ಸೌಂದರ್ಯ : ಬೆಟ್ಟದ ಸುತ್ತಲೂ ಸಾಮಾಜಿಕ ಮೀಸಲು ಅರಣ್ಯಪ್ರದೇಶವಿದ್ದು,ಇಲ್ಲಿನ ಬೆಟ್ಟಸಾಲು ಮಳೆಗಾಲದ ನಂತರ ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತದೆ. ಭಕ್ತರನ್ನು,ಚಾರಣಿಗರನ್ನು.. ತನ್ನತ್ತ ಕೈಬೀಸಿ ಕರೆಯುತ್ತದೆ. ಬೆಟ್ಟದ ತುದಿಗೆ ತಲುಪಿದರೆ ದೇವರ ದರ್ಶನದ ಜೊತೆಗೆ ಅಪರೂಪದ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಸರ್ಕಾರ ಈ ಬಗ್ಗೆ ಗಮನಹರಿಸಿ ಉತ್ತಮ ಪ್ರವಾಸಿ ತಾಣ ಮಾಡಬೇಕೆಂದು ಸ್ಥಳೀಯರ ಅನಿಸಿಕೆಯಾಗಿದೆ. ಪ್ರಚಾರದ ಕೊರತೆ, ಮಾಹಿತಿಯ ಕೊರತೆಯಿಂದ ಸ್ಥಳೀಯರಿಗೆ ಬಿಟ್ಟರೆ ಹೊರಗಿನ ವ್ಯಕ್ತಿಗಳಿಗೆ ಈ ಸುಂದರ ಪ್ರದೇಶ ಇರುವ ಬಗ್ಗೆ ಮಾಹಿತಿ ಅಷ್ಟಾಗಿ ಇರುವುದಿಲ್ಲ.

ಭೂತಪ್ಪ ದೇವಾಲಯ : ಕೋಟೆಯ ಕೆಳಭಾಗದಲ್ಲಿ ಆಂಜನೇಯ ಗುಡಿಯ ಸ್ವಲ್ಪದೂರದಲ್ಲಿ ಇರುವ ಭೂತಪ್ಪ ದೇವಾಲಯಕ್ಕೆ ಭಕ್ತರು ಹರಕೆ ರೂಪದಲ್ಲಿ ಎಡೆ ಅರ್ಪಿಸುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks