ಸುದ್ದಿಒನ್, ಹಿರಿಯೂರು, ಜುಲೈ. 25 : ನಗರದ ನಗರಸಭೆ ಕಾರ್ಯಾಲಯ ಸಭಾಂಗಣದಲ್ಲಿ ಅಧ್ಯಕ್ಷ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಗರಸಭೆ ವಿಶೇಷ ಸಾಮಾನ್ಯ ಸಭೆ ಜರುಗಿತು.
2025 -2026 ನೇ ಸಾಲಿನ ಎಸ್ ಎಫ್ ಸಿ ಮುಕ್ತನಿಧಿ ಶೇ 5 ರ ಯೋಜನೆಯಲ್ಲಿ ನಗರದಲ್ಲಿ ವಾಸವಾಗಿರುವ ದಿವ್ಯಾಂಗರ ಅನಿಲರಹಿತ ಕುಟುಂಬಗಳಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಅಡುಗೆ ಅನಿಲ ಸಂಪರ್ಕ ಪಡೆಯಲು ಸಹಾಯಧನ ಒದಗಿಸುವುದು. ಅಗತ್ಯವಿದ್ದಲ್ಲಿ ಸಂಪರ್ಕದೊಂದಿಗೆ ಒಂದು ಸ್ಟೌವ್ ಹಾಗೂ ಒಂದು ಸಿಲಿಂಡರ್ ಒದಗಿಸಲು ಫಲಾನುಭವಿಗಳನ್ನು ಆಯ್ಕೆ ಮಾಡುವುದು. 2025 – 2026 ನೇ ಸಾಲಿನ ನಗರ ಸಭೆ ನಿಧಿಯ ಶೇ 24. 10ರಷ್ಟು ಯೋಜನೆಯಲ್ಲಿ ನಗರದ ವ್ಯಾಪ್ತಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯ ಪತ್ರಕರ್ತರಿಗೆ ಲ್ಯಾಪ್ಟಾಪ್ ಖರೀದಿಸಲು ಸಹಾಯಧನ ನೀಡುವ ಬಗ್ಗೆ ಹಾಗೂ ಫಲಾನುಭವಿಗಳನ್ನು ಆಯ್ಕೆ ಮಾಡುವ ವಿಚಾರ ಕುರಿತು ಮತ್ತು ನಗರಸಭೆ ಘನತ್ಯಾಜ್ಯ ವಸ್ತು ನಿರ್ವಹಣೆ ಸಂಸ್ಕರಣ ಘಟಕಕ್ಕೆ ವಾಹನ ಚಾಲಕರು, ಸಿಬ್ಬಂದಿಗಳು ಹಾಗೂ ಸಹಾಯಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಿಕೊಳ್ಳಲು ಬಂದಿರುವ ಟೆಂಡರನ್ನು ಪರಿಶೀಲಿಸಿ ಅನುಮೋದಿಸುವ ವಿಚಾರವಾಗಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಆನಂತರದ ಚರ್ಚೆಯಲ್ಲಿ ನಗರಸಭೆ ಸದಸ್ಯ ಮಹೇಶ್ ಪಲ್ಲವ ಮಾತನಾಡಿ ನಗರಸಭೆ ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದು, 47 ಜನ ಕಾರ್ಮಿಕರನ್ನು ನೇಮಿಸಿಕೊಂಡಿದ್ದು ಇದೀಗ ಅವರಲ್ಲಿ ಕೆಲವರನ್ನು ಹೊರ ಹಾಕುವುದು ಯಾಕೆ ಎಂದು ಪ್ರಶ್ನಿಸಿದರು. ಜೊತೆಗೆ ಪೌರ ಕಾರ್ಮಿಕರಾಗಿದ್ದುಕೊಂಡು ಸೂಪರ್ ವೈಸರ್ ಎಂದು ಹೇಳಿಕೊಂಡು ಕಚೇರಿಯಲ್ಲಿಯೇ ಕಾಲ ಹಾಕುತ್ತಿದ್ದಾರೆ. ಅವರು ಮೊದಲು ಕೆಲಸ ಮಾಡಲಿ ಎಂದರು.
ಸದಸ್ಯ ಈ. ಮಂಜುನಾಥ್ ಮಾತನಾಡಿ ನಗರಸಭೆಗೆ ಎಷ್ಟು ಜನ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ಇದೆ, ಈಗ ಎಷ್ಟು ಜನ ಕೆಲಸಕ್ಕೆ ತೆಗೆದುಕೊಂಡಿರುವುದು ಹಾಗೂ ಆರೇಳು ತಿಂಗಳಿಂದ ಕರ್ತವ್ಯ ನಿರ್ವಹಿಸಿರುವವರನ್ನು ಸಹ ಕೆಲಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿ ಎಂದರು.
ಮಾಜಿ ನಗರಸಭೆ ಅಧ್ಯಕ್ಷ ಹಾಲಿ ಸದಸ್ಯ ಅಜಯ್ ಕುಮಾರ್ ಮಾತನಾಡಿ 2011ರಲ್ಲಿ ನಗರದಲ್ಲಿ 56,416 ಮಂದಿ ಜನಸಂಖ್ಯೆ ಇತ್ತು. ಇಂದಿಗೆ ಸುಮಾರು 75 ಸಾವಿರದಷ್ಟು ಜನಸಂಖ್ಯೆ ಹೆಚ್ಚಿದೆ. ಸುಮಾರು 500 ಜನಕ್ಕೆ ಒಬ್ಬರಂತೆ 75 ಜನರನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಅವಕಾಶ ನೀಡಿದ್ದರು.ಇದೀಗ ಅವರಲ್ಲಿ ಯಾರನ್ನೂ ಕೆಲಸದಿಂದ ತೆಗೆಯುವುದು ಬೇಡ ಎಂದರು.
ಬಿ.ಎನ್. ಪ್ರಕಾಶ್ ಮಾತನಾಡಿ ಪೌರ ಕಾರ್ಮಿಕರನ್ನು ಬೀದಿ ಪಾಲು ಮಾಡುವ ಹಾಗಿಲ್ಲ. ಹೆಚ್ಚಿಗೆ ಇರುವ ಆರೇಳು ಕಾರ್ಮಿಕರನ್ನು ತೆಗೆದುಕೊಳ್ಳಲು ಸಚಿವರಿಂದ ಡಿಸಿ ಯವರಿಗೆ ಪತ್ರ ಬರೆಸೋಣ. ಜನಸಂಖ್ಯೆ ಆಧಾರದ ಮೇಲೆ ಉಳಿದವರನ್ನು ಅನುಮತಿ ಮಾಡಿಸಿ ಸಂಬಳ ಕೊಡಿಸಬೇಕು ಎಂದಾಗ ಸದಸ್ಯರ ಮಾತಿಗೆ ಪೌರಾಯುಕ್ತ ಎ ವಾಸಿಂ ಉತ್ತರಿಸಿ ಸೊಮೇರಹಳ್ಳಿ ತಾಂಡಾ ನಗರಸಭೆಗೆ ಸೇರಿದೆ. ಹಾಗಾಗಿ ಜನಸಂಖ್ಯೆ ಹೆಚ್ಚಾದದ್ದನ್ನು ತೋರಿಸಿ ಉಳಿದವರನ್ನು ಸಹ ಕೆಲಸದಲ್ಲೇ ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಎ ವಾಸಿಂ, ನಗರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ವಿಠ್ಠಲ ಪಾಂಡುರಂಗ, ಮಮತಾ, ಎಂಡಿ ಸಣ್ಣಪ್ಪ, ರತ್ನಮ್ಮ, ನಗರಸಭೆ ಸದಸ್ಯರಾದ ಶಿವರಂಜನಿ ಯಾದವ್, ಗುಂಡೇಶ್ ಕುಮಾರ್, ಚಿತ್ರಜಿತ್ ಯಾದವ್, ಜಿಎಸ್ ತಿಪ್ಪೇಸ್ವಾಮಿ, ಅನಿಲ್ ಕುಮಾರ್, ಈರಲಿಂಗೇಗೌಡ, ಸಮೀವುಲ್ಲಾ, ಜಗದೀಶ್, ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.











