ನಮ್ಮೂರ ದೇಗುಲ : ಗುಡ್ಡದ ಗುಹೇಶ್ವರ ದೇವಾಲಯದ ಪರಿಚಯ

3 Min Read

ವಿಶೇಷ ಲೇಖನ
ಡಾ.ಕೆ.ವಿ.ಸಂತೋಷ್, ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ. ಮೊ : 9342466936

ಚಿತ್ರದುರ್ಗ ನಗರದಿಂದ ಯಾವುದೇ ಎತ್ತರದ ಜಾಗದಿಂದ ಜಗಳೂರು ಕಡೆಗೆ ನೋಡಿದರೆ(ಗುಡ್ಡದ ರಂಗವ್ವನಹಳ್ಳಿ ಗುಡ್ಡದ ಸಾಲುಗಳ ಹಿಂಭಾಗದಲ್ಲಿ) ವಾಯುವ್ಯ ದಿಕ್ಕಿನಲ್ಲಿ ಕಾಣುವ ದೊಡ್ಡ ಗುಡ್ಡವೇ ಗುಹೇಶ್ವರ/ಗೋಸೆರಪ್ಪನ ಗುಡ್ಡ. ಇದು ಚಿತ್ರದುರ್ಗದಿಂದ 42 ಕಿಲೋಮೀಟರ್ ದೂರದಲ್ಲಿದೆ. ಚಿತ್ರದುರ್ಗದಿಂದ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಸಾಗಿ ಕಲ್ಲೇದೇವರಪುರ ಅಥವಾ ಸಂಗೇನಹಳ್ಳಿ ಕೆರೆ ರಸ್ತೆಯಲ್ಲಿ ಎಡಭಾಗದಲ್ಲಿ ತಿರುವು ಪಡೆದು ತೋರಣಗಟ್ಟೆ ತಲುಪಿ ಅಲ್ಲಿಂದ ಮುಂದಕ್ಕೆ ಸಾಗಿ ಎಡಭಾಗದಲ್ಲಿ ಗುಡ್ಡದ ಹಾದಿಯಲ್ಲಿ ಮುಖ್ಯರಸ್ತೆಯಿಂದ 9 ಕಿಲೋಮೀಟರ್ ಕಲ್ಲು-ಮಣ್ಣಿನ ಹಾದಿಯಲ್ಲಿ ಸಾಗಬೇಕು.ಈ 9 ಕಿ.ಮೀ.ಸಾಗಲು ಕನಿಷ್ಟ30-40 ನಿಮಿಷ ಬೇಕು.ಇದು ಉತ್ತರ ಭಾಗದ ದಾರಿಯಾಗಿದೆ.
ಗುಡ್ಡವು 3500 ಅಡಿಗಿಂತಲೂ ಹೆಚ್ಚು ಎತ್ತರವಿದ್ದು, ಜಗಳೂರು ತಾಲೂಕಿನಲ್ಲಿ ಎತ್ತರದ ಬೆಟ್ಟವಾಗಿದೆ.

 

ಹಿಂದೆ ಇದೊಂದು ಪ್ರಮುಖ ಶೈವ ಕ್ಷೇತ್ರವಾಗಿತ್ತು.ಇಲ್ಲಿರುವ ಗುಹೇಶ್ವರ ಶಿವಲಿಂಗದಿಂದ ಈ ಗುಡ್ಡಕ್ಕೆ ಗುಹೇಶ್ವರನ ಬೆಟ್ಟ ಎಂದು ಹೆಸರಾಗಿದೆ.ಆಡುಭಾಷೆಯಲ್ಲಿ ಇದನ್ನು ಗೋಸೆರಪ್ಪನ ಬೆಟ್ಟ ಎನ್ನುತ್ತಾರೆ.ಇದಕ್ಕೆ 2 ಮಾರ್ಗದಲ್ಲಿ ಹೋಗಬಹುದು.
ದಕ್ಷಿಣ ಹಾಗೂ ಉತ್ತರದ ದಾರಿಗಳು.

1.ದಕ್ಷಿಣದ ದಾರಿ:ಇದು ದಕ್ಷಿಣ ಭಾಗದಿಂದ ಗುಡ್ಡಕ್ಕೆ ಏರುವ ದಾರಿಯಾಗಿದೆ .ಇದು ಕಲ್ಲು ಮಣ್ಣಿನ ಕಾಲುದಾರಿಯಾಗಿದೆ.ಇದಕ್ಕೆ ಚಿಕ್ಕಗೊಂಡನಹಳ್ಳಿ-ಚಿಪ್ಪಿನಕೆರೆ ..ನಂತರದ ದಾರಿಯಲ್ಲಿ ಹೋಗಬೇಕಾಗುತ್ತದೆ.ಇದು ಹತ್ತಿರದ ದಾರಿಯಾಗಿದೆ.ಹಿಂದಿನಿಂದಲೂ ಈ ದಾರಿ ಮಾತ್ರ ಇದ್ದಿತು.ಕಾಲುದಾರಿಯಿಂದ ಮಾತ್ರವೇ ಇಲ್ಲಿಗೆ ತಲುಪಬೇಕು.ಚಿಪ್ಪಿನಕೆರೆವರೆಗೂ ಮಾತ್ರ ಬೈಕ್/ಕಾರು ಹೋಗುತ್ತದೆ. ನಂತರ ಬೈಕ್ ಕೂಡಾ ಹೋಗಲಾಗದು.

2.ಉತ್ತರದ ದಾರಿ :ಇದು ಕಲ್ಲು ಮಣ್ಣಿನ ಬೈಕ್/ಕಾರ್ ನಲ್ಲಿ ಹೋಗುವ ಸುಲಭದ ದಾರಿಯಾಗಿದೆ.
ಮೇಲ್ಭಾಗದ ತುದಿಯವರೆಗೂ ಇಂತಹ ರಸ್ತೆಯಲ್ಲಿ ಸಾಗಬೇಕು.

ಇತಿಹಾಸ:
ಗುಹೇಶ್ವರ ಬೆಟ್ಟದ ಮೇಲೆ ಇರುವ ಪ್ರಾಚೀನ ದೇವಾಲಯವಾದ ಗುಹೇಶ್ವರ ದೇವಾಲಯವು 12-13 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ.ಹಳೆಯ ದೇವಾಲಯದ ಹಿಂಬದಿಯಲ್ಲಿ ಈಗ ಹೊಸದಾಗಿ ದೇವಾಲಯ ಕಟ್ಟಲಾಗಿದೆ.ಮೂಲ ದೇವಾಲಯವನ್ನು ಸ್ಥಳಿಯವಾಗಿ ಬೆಟ್ಟದ ಮೇಲೆ ದೊರೆಯುವ ಕಲ್ಲುಗಳನ್ನೇ ಬಳಸಿ ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಕಟ್ಟಲಾಗಿತ್ತು .ಅದು ಹೆಚ್ಚು ಎತ್ತರವಾಗಿರದೆ ಮನುಷ್ಯ ಬಗ್ಗಿ ಹೋಗಿ ಪೂಜಾ ಕಾರ್ಯಗಳನ್ನು ಮಾಡಬೇಕಾಗಿತ್ತು .ಆದರೆ ಬೆಟ್ಟದ ಅಕ್ಕ ಪಕ್ಕದಲ್ಲಿ ಹದಿನೈದು ವರ್ಷಗಳ ಹಿಂದೆ ಗಾಳಿಯಂತ್ರಗಳನ್ನು ಸ್ಥಾಪಿಸಿದ ಮೇಲೆ ಹಳೆಯ ದೇವಾಲಯದ ಕಲ್ಲುಗಳನ್ನು ತೆಗೆದು ಹೊಸ ದೇವಾಲಯಕ್ಕೆ ಬಳಸಿ ಕಟ್ಟಲಾಗಿದೆ .ಆದರೆ ಶಿವಲಿಂಗವನ್ನು ಸ್ಥಳಾಂತರಿಸಿರುವುದಿಲ್ಲ.

ಹಳೆಯ ಶಿವಲಿಂಗವು ಕಪ್ಪುಶಿಲೆಯಲ್ಲಿದೆ. ಪಾನವಟ್ಟ ಮತ್ತು ಲಿಂಗವಿದ್ದು ,ಅಷ್ಟೇನೂ ನಯವಲ್ಲದ ಸಾಮಾನ್ಯವಾಗಿದೆ. ಆದರೆ ಇದರ ಆರಾಧನೆಯು ತುಂಬಾ ಪ್ರಾಚೀನವಾದದ್ದು .ಇದು ಚಾಲುಕ್ಯರ ಕಾಲಕ್ಕೆ ಹೋಗುತ್ತದೆ. ಇದಕ್ಕೆ ಪೂರಕವಾಗಿ ಬೆಟ್ಟದ ಬಳಿಯ ಕಲ್ಲೇದೇವರಪುರದಲ್ಲಿ ಕಲ್ಲೇಶ್ವರ ದೇವಾಲಯ ,ಯಳಗೋಡಿನಲ್ಲಿ ಭೋಗೇಶ್ವರ ದೇವಾಲಯಗಳಿದ್ದು,ಇವು ಕಲ್ಯಾಣ ಚಾಲುಕ್ಯ ಹಾಗೂ ಹೊಯ್ಸಳರ ಕಾಲದಲ್ಲಿ ಪ್ರಸಿದ್ಧವಾದ ಧಾರ್ಮಿಕ ಕೇಂದ್ರಗಳಾಗಿದ್ದವು.ಅಲ್ಲದೆ ಈ ಬೆಟ್ಟವು ಈ ಭಾಗದ ಎತ್ತರದ ಗುಡ್ಡವಾಗಿರುವುದರಿಂದ ಇದನ್ನು ಆರಾಧನೆಯ ಕೇಂದ್ರವನ್ನಾಗಿ ಮಾಡಿಕೊಂಡಿರುವುದು ಸಹಜವೇ ಆಗಿದೆ.ಅಲ್ಲದೆ ಗುಹೇಶ್ವರ ಬೆಟ್ಟವು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಇಂದಿಗೂ ಪವಿತ್ರವಾದ ಸ್ಥಳವಾಗಿದೆ. ಪ್ರತಿ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಸುತ್ತಮುತ್ತಲಿನ ಅನೇಕ ಹಳ್ಳಿಗಳ ಜನರು ತಮ್ಮ ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಗಳಲ್ಲಿ ತಂದು ಇಲ್ಲಿ ಪೂಜಿಸುವುದು ರೂಢಿಯಲ್ಲಿದೆ .ಅಲ್ಲದೆ ಇಲ್ಲಿನ ಗುಹೇಶ್ವರನನ್ನು ಅಂದು ವಿಶೇಷ ಪೂಜಾ ಉತ್ಸವ ಗಳೊಂದಿಗೆ ಆರಾಧಿಸುವ ಸಂಪ್ರದಾಯವನ್ನು ಇಂದಿಗೂ ಕಾಣಬಹುದಾಗಿದೆ.

ಬೆಟ್ಟದ ಮೇಲ್ಭಾಗದಲ್ಲಿ ವಿಶಾಲವಾದ ಜಾಗವಿದೆ.ಅಲ್ಲಿಗೆ ತಲುಪಿದಾಗ ಸುತ್ತಮುತ್ತಲಿನ 40-50 ಕಿ.ಮೀ ದೂರದ ಚಿತ್ರದುರ್ಗ ನಗರ, ದಾವಣಗೆರೆ, ಜಗಳೂರು, ತುರುವನೂರು, ಚಿತ್ರದುರ್ಗದ ಗಿರಿಸಾಲುಗಳು, ಕಣಕುಪ್ಪೆ ಬೆಟ್ಟದ ಸಾಲು,ನಾಯಕನಹಟ್ಟಿ, ಕೂಡ್ಲಿಗಿ ತಾಲೂಕಿನ ಹತ್ತಾರು ಊರುಗಳನ್ನು,ಸುತ್ತಮುತ್ತಲಿನ ಹತ್ತಾರು ಗ್ರಾಮಗಳನ್ನು ನೋಡಬಹುದು.

ಮೇಲಿನಿಂದ ಕಾಣುವ ಸುಂದರ ವಾತಾವರಣ ಕಣ್ಣಿಗೆ ಖುಷಿ, ಮನಸ್ಸಿಗೆ ಆನಂದ ತರುತ್ತದೆ. ಬಂದ ಆಯಾಸ ಬೀಸುವ ತಂಪಾದ ಗಾಳಿಗೆ ಮರೆತು ಹೋಗುತ್ತದೆ.ಜೊತೆಗೆ ಹತ್ತಾರು ವಿವಿಧ ಜಾತಿಯ ಪಕ್ಷಿಗಳು, ಮೊಲ, ಕಾಡು ಕೋಳಿ, ನವಿಲು,ಮುಂಗುಸಿ, ಉಡ….ಚಾರಣ ಮಾಡುವಾಗ/ ಹತ್ತುವಾಗ ನೋಡಬಹುದು.  ಇದಕ್ಕಾಗಿ ಬೆಳಗಿನ ಹೊತ್ತು ಹೋಗಬೇಕು. ಚಾರಣಕ್ಕೆ 3-4 ಜನರು ಹೋದರೆ ಅನುಕೂಲ.ಮರೆಯಲಾರದ ಸುಂದರ ನೆನಪು ಉಳಿಯುತ್ತದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks