ವಿಶೇಷ ಲೇಖನ
ಡಾ.ಕೆ.ವಿ.ಸಂತೋಷ್
ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ ಮೊ : 9342466936
ಹೊಸದುರ್ಗ ತಾಲೂಕು ಕೇಂದ್ರದಿಂದ 10
ಕಿಲೋಮೀಟರ್ ದೂರ ಉತ್ತರಕ್ಕೆ ,
ಹೊಸದುರ್ಗ -ಶಿವಗಂಗ ರಸ್ತೆಯಲ್ಲಿರುವ ಈ ಪವಿತ್ರ ಪುಣ್ಯಕ್ಷೇತ್ರವು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ.
ಹೊಸದುರ್ಗ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಹಾಲುರಾಮೇಶ್ವರ ದೇವಾಲಯವು ಒಂದಾಗಿದೆ. ಹಿಂದೆ ಇದ್ದ ದೇವಾಲಯವನ್ನು ತೆಗೆದು ಇದೀಗ ನೂತನ ದೇವಾಲಯ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಹಿಂದಿನ ದೇವಾಲಯವು 17 -18 ನೇ ಶತಮಾನದಲ್ಲಿ ಪಾಂಸನ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ವಿಶಾಲವಾದ ಪ್ರಾಂಗಣದಲ್ಲಿ ಗಂಗಾದೇವಿ,ಸೀತಾರಾಮ ಈಶ್ವರ ಮೊದಲಾದ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಗರ್ಭಗೃಹದಲ್ಲಿ ರಾಮೇಶ್ವರನೆಂದು ಕರೆಯುವ ಅರ್ಧ ಅಡಿ ಎತ್ತರದ ಸ್ವಯಂಭೂ ಶಿವಲಿಂಗವನ್ನು ಆರಾಧಿಸಲಾಗುತ್ತದೆ. ಐತಿಹ್ಯದಂತೆ ರಾಮಾಯಣ ಕಾಲದಲ್ಲಿ ಹಿಂದೆ ಇದನ್ನು ಶ್ರೀರಾಮನು ಪ್ರತಿಷ್ಠಾಪಿಸಿದನೆಂದು ಹೇಳಲಾಗುತ್ತದೆ. ಆ ಕಾರಣಕ್ಕೆ ಇದಕ್ಕೆ ರಾಮೇಶ್ವರ ಲಿಂಗವೆಂದು ಹೆಸರಾಗಿದೆ ಎನ್ನಲಾಗುತ್ತದೆ. ದೇವಾಲಯದ ಮುಂಭಾಗದಲ್ಲಿ 30 ಅಡಿ ಎತ್ತರದ ದೀಪಸ್ತಂಭವನ್ನು ನಿಲ್ಲಿಸಲಾಗಿದೆ.
ಗಂಗಾದೇವಿಯ ದೇವಾಲಯ :
ರಾಮೇಶ್ವರ ದೇವಾಲಯದ ಹಿಂಭಾಗದಲ್ಲಿ ಗಂಗಾ ದೇವಿಯ ದೇಗುಲವಿದ್ದು ಇದು ಗರ್ಭಗೃಹವನ್ನು ಒಳಗೊಂಡಿದೆ.
ಗಂಗಾದೇವಿ ದೇಗುಲದ ಕೆಳಭಾಗದಲ್ಲಿ ನೀರಿನ ಚಿಕ್ಕ ಬಾವಿ ಇದ್ದು,ಇದನ್ನು ಗಂಗಮ್ಮ ಎಂದು ಪೂಜಿಸಲಾಗುತ್ತದೆ. ಇದರ ವಿಶೇಷತೆ ಎಂದರೆ ಇದೊಂದು ನೀರಿನ ಚಿಲುಮೆಯಾಗಿದ್ದು ನೀರಿನಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಕುರುಹುಗಳನ್ನು ಕೇಳುವ ಸಂಪ್ರದಾಯವಿದೆ.
ಅದರ ಪ್ರಕಾರ ನೀರಿನಿಂದ ಬಾಳೆಹಣ್ಣು, ಕಾಯಿಚೂರು, ಉತ್ಪತ್ತಿ,ದ್ರಾಕ್ಷಿ,ಬಳೆಯ ಚೂರು ಮೊದಲಾದ ವಸ್ತುಗಳನ್ನು ಹಾಕಿರುತ್ತಾರೆ.ಅವುಗಳಲ್ಲಿ ಯಾವುದಾದರೊಂದು ತೇಲಿ ಮೇಲಕ್ಕೆ ಬಂದು ತಮ್ಮ ಕೈಗೆ ದೊರೆತರೆ ಅದರ ಅನ್ವಯ ತಮ್ಮ ಕಾರ್ಯಗಳು ಫಲಿಸುತ್ತವೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ.ಇಲ್ಲಿ ಗಂಗಾ , ಯಮುನಾ ಹಾಗೂ ಸರಸ್ವತಿ ಎಂಬ ಮೂರು ಕೊಳಗಳಿವೆ. ಗಂಗಾ ಕೊಳದ ನೀರು ಹರಿದು ಹೊರಗಿನ ಎರಡು ಕೊಳಗಳಿಗೆ ಸೇರುತ್ತದೆ, ಇದು ಮುಂದೆ ಹಳ್ಳಕ್ಕೆ ಸೇರುತ್ತದೆ. ಗಂಗಾಕೊಳದ ಮೇಲೆ ವಾಲ್ಮೀಕಿ ಮಹರ್ಷಿ ಪ್ರತಿಷ್ಠಾಪಿತ ಗಂಗಾಮಾತೆಯ ವಿಗ್ರಹವಿದೆ.
ದೇವಾಲಯದ ಹಿಂಭಾಗದಲ್ಲಿ ಕಣಿವೆ ಹಾಗೂ ಬೆಟ್ಟ ಪ್ರದೇಶವಿದ್ದು ಕಣಿವೆಗಳಲ್ಲಿ ಸಾಮಾನ್ಯವಾಗಿ ನೀರಿನ ಸೆಲೆಗಳಿರುವುದು ಸಹಜವಾಗಿದ್ದು ಇಂತಹ ಚಿಲುಮೆಗಳಿರುವ ಸ್ಥಳಗಳನ್ನು ವಜ್ಜುರ (ವಜ್ರ ) ಎಂದು ಈ ಭಾಗದಲ್ಲಿ ಕರೆಯುವುದು ಸಾಮಾನ್ಯವಾಗಿದೆ. ಅಂತೆಯೇ ಈ ಕೊಳಗಳಲ್ಲಿ ನೀರು ಸಹಜವಾಗಿಯೇ ಸೆಲೆಗಳಲ್ಲಿ ಉಕ್ಕುತ್ತದೆ. ನೀರಿನ ಸೆಳೆತವು ತೀವ್ರವಾಗಿರುವುದರಿಂದ ನೀರಿನಲ್ಲಿ ಹಾಕಿದ ವಸ್ತುಗಳು ನೀರಿನ ಚಲನೆಯ ಹಿನ್ನೆಲೆಯಲ್ಲಿ ತೇಲಿ ಮೇಲಕ್ಕೆ ಬರುತ್ತವೆ. ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಇಲ್ಲಿ ಬಂದು ಗಂಗೆಯನ್ನು ಪೂಜಿಸಿ ಸಂತಾನ ಕರುಣಿಸುವಂತೆ ಪೂಜಿಸಿದ್ದರಂತೆ. ಆ ನಂತರವೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಜನಿಸಿದರು ಎಂದು ನಂಬಿಕೆ ಇದೆ. ಗಂಗಾ ಮಾತೆಯನ್ನು ಪೂಜಿಸಿ ಫಲ ಪಡೆಯುವ ಈ ನಂಬಿಕೆಯು ಆಚರಣೆಯಾಗಿ ಮುಂದುವರೆದಿದೆ.
ಗಂಗಾಮಾತೆಯ ದೇವಾಲಯದ ಬಳಿಯಲ್ಲಿಯೇ ಸೀತಾರಾಮ ದೇವಾಲಯವಿದೆ. ಇದನ್ನು ಕೂಡ ಇದೀಗ ನೂತನವಾಗಿ ನಿರ್ಮಾಣ ಮಾಡಲಾಗುತ್ತಿದೆ. ಈ ದೇವಾಲಯದಲ್ಲಿ ಶ್ರೀರಾಮ ಲಕ್ಷ್ಮಣ ಸೀತಾಮಾತೆ ಹನುಮಂತನನ್ನು ಪೂಜಿಸಲಾಗುತ್ತದೆ. ರಾಮೇಶ್ವರ ದೇವಾಲಯದ ವಿಶೇಷ ಉತ್ಸವಗಳು ಶಿವರಾತ್ರಿಯಲ್ಲಿ 9 ದಿನಗಳ ಕಾಲ ವಿಜೃಂಭಣೆಯಿಂದ ಜರುಗುತ್ತದೆ.
ಜನಪದದ ಉಲ್ಲೇಖದಂತೆ ಹಿಂದೆ
ವಾಲ್ಮೀಕಿ ಮಹರ್ಷಿಗಳ ಪತ್ನಿ ಸುದತಿದೇವಿ ಕಾಶಿಯಲ್ಲಿ ಗಂಗೆಗೆ ಬಾಗಿನ ರೂಪದಲ್ಲಿ ಸಮರ್ಪಿಸಿದ ವಜ್ರಖಚಿತ ಕಡಗ ಈ ಊರಿನ ಹುತ್ತದಲ್ಲಿ ದೊರಕಿತಂತೆ, ಆಗ ಇಲ್ಲಿ ಗಂಗೋದ್ಭವವು ಆಯಿತಂತೆ. ಈ ವಿಷಯ ತಿಳಿದ ವಾಲ್ಮೀಕಿ ಮಹರ್ಷಿಗಳು ಇಲ್ಲಿಯೇ ನೆಲೆ ನಿಂತು ಬರುವ ಭಕ್ತರ ಬೇಡಿದ ಪ್ರಸಾದ ನೀಡೆಂದು ಗಂಗೆಗೆ ತಿಳಿಸಿ, ಗಂಗಾಮಾತೆ ವಿಗ್ರಹ ಪ್ರತಿಷ್ಠಾಪಿಸಿ ರಾಮೇಶ್ವರದತ್ತ ಹೊರಟರಂತೆ. ಆಗ ಹಾಲಿನ ಬಣ್ಣದ ಸ್ವಚ್ಛಂದ ನೀರು ಉದ್ಭವಿಸಿದ ಕಾರಣಕ್ಕೆ ಹಾಗೂ ಇಲ್ಲಿದ್ದ ರಾಮೇಶ್ವರನ ಲಿಂಗದ ಹೆಸರು ಸೇರಿಸಿ ಹಾಲುರಾಮೇಶ್ವರ ಹೆಸರು ಬಂದಿತೆಂದು ಹೇಳಲಾಗುತ್ತದೆ.
ಮದುವೆ ಮುಂತಾದ ಶುಭ ಸಮಾರಂಭಗಳು ಸದಾ ಕಾಲ ಇಲ್ಲಿ ಜರುಗುತ್ತವೆ. ಅಕ್ಕಪಕ್ಕದ ತಾಲೂಕು, ಜಿಲ್ಲೆಗಳಿಂದ ದೇವಾಲಯದ ದೇವರುಗಳನ್ನು ಇಲ್ಲಿಗೆ ಗಂಗಾಪೂಜೆಗೆ ಹಾಗೂ ಹೊಳೆಪೂಜೆಗೆ ತರಲಾಗುತ್ತದೆ.




