ಬೆಂಗಳೂರು: ಈ ಹಾರ್ಟ್ ಅಟ್ಯಾಕ್ ಅನ್ನೋದು ಭೂತದಂತೆ ಕಾಡುತ್ತಿದೆ. ಎಲ್ಲಂದರೆಲ್ಲಿ ಕೂತವರು, ನಿಂತವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿಯ ಸಾವುಗಳ ಕೇಳಿ ಜನ ಸಾಮಾನ್ಯ ಹೆದರಿ ಹೋಗಿದ್ದಾನೆ. ಇದೀಗ ಪ್ರತಿಭಟನೆ ಮಾಡಲು ಬಂದಿದ್ದ ರೈತನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ಇಲ್ಲಿಯೇ ಜೀವ ಬಿಟ್ಟಿದ್ದಾರೆ. ಗುಂಡ್ಲುಪೇಟೆಯ ಕುರಿಹುಂಡಿ ಮೂಲದ ಈಶ್ವರಪ್ಪ ನಿಧನರಾಗಿದ್ದಾರೆ.
ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ KIADB ಭೂಸ್ವಾಧೀನ ವಿರೋಧಿಸಿ ಇಂದು ರೈತರೆಲ್ಲ ಸೇರಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಮೃತ ಈಶ್ವರಪ್ಪ ರೈಲಿನ ಮೂಲಕ ಬೆಂಗಳೂರಿಗೆ ಬಂದಿದ್ದರು. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಹಿರಗೆ ಬಂದಾಗ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ನೀಡುವುದಕ್ಕೆ ಪ್ರಯತ್ನ ಮಾಡಲಾಯಿತಾದರೂ ಫಲಕಾರಿಯಾಗದೆ ಈಶ್ವರಪ್ಪ ನಿಧನರಾಗಿದ್ದಾರೆ.
ಜಮೀನು ಭೂಸ್ವಾಧೀನ ಆಗುತ್ತಿರುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ಮಾಡಲು ಬಂದಿದ್ದಾರೆ. ಇತ್ತೀಚಿನ ಲೈಫ್ ಸ್ಟೈಲ್ ಸರಿಯಾಗಿಲ್ಲದ ಕಾರಣ ಈ ರೀತಿಯ ಹಾರ್ಟ್ ಅಟ್ಯಾಕ್ ಗಳು ಆಗ್ತಾ ಇದಾವೆ ಎಂಬ ಮಾತು ಕೇಳಿ ಬರುತ್ತಿವೆ. ಆದರೆ ರೈತರು ಬೆಳಗ್ಗೆ ಆದರೆ ತಮ್ಮ ಜಮೀನುಗಳಲ್ಲಿ ಮೈಬಗ್ಗಿಸಿ, ಬೆವರು ಸುರಿಯುವಷ್ಟು ಕೆಲಸ ಮಾಡ್ತಾರೆ. ಆದರೆ ಅವರಿಗೂ ಹಾರ್ಟ್ ಅಟ್ಯಾಕ್ ಆಗಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ. ಸಾಕಷ್ಟು ಸಲ ಹಲವರು ಹೇಳಿದ್ದಾರೆ. ತಾವೂ ತಿನ್ನುವ ಪ್ರತಿ ಆಹಾರದಲ್ಲೂ ಕೆಮಿಕಲ್ ಹೆಚ್ಚಾಗಿದೆ ಅಂತ. ಬೆಳೆ ಬೆಳೆಯುವಾಗ ರಾಸಾಯನಿಕವನ್ನು ಹೆಚ್ಚಾಗಿ ಬಳಸುತ್ತಿರುವುದು ಅನಾರೋಗ್ಯಕ್ಕೂ ಕಾರಣವಾಗುತ್ತಿದೆ ಎಂಬ ಮಾತುಗಳು ಇದಾವೆ.















