ಬಗರ್ ಹುಕುಂ ರೈತರಿಗೆ ಸಾಗುವಳಿ ಪತ್ರ ನೀಡಿ : ಭಾರತ ಕಮ್ಯುನಿಸ್ಟ್ ಪಕ್ಷ ಒತ್ತಾಯ

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್.17 : ಮೊಳಕಾಲ್ಮುರು ತಾಲ್ಲೂಕಿನ ಫಾರಂ ನಂ. 57 ರ ಬಗರ್ ಹುಕುಂ ರೈತರಿಗೆ ಸಾಗುವಳಿ ಪತ್ರ ನೀಡುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕ ಹಾಗೂ ಅರಣ್ಯ ಇಲಾಖೆ ಎಸಿಎಫ್. ಮೂಲಕ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಕಮ್ಯುನಿಸ್ಟ್ ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಸಾಧನಾ ಸಮಾವೇಶದಲ್ಲಿ ಕೃಷಿ ಸಚಿವರು ಒಂದು ಲಕ್ಷ ರೈತರಿಗೆ ಸಾಗುವಳಿ ಚೀಟಿ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಬಗರ್‍ಹುಕುಂ ಭೂಮಿ ಕಂದಾಯ ಇಲಾಖೆ, ಅರಣ್ಯ ಇಲಾಖೆಗೆ ಸೇರಲ್ಲ ಎನ್ನುವುದಾದರೆ ಮತ್ತಿನ್ಯಾರು ಇದರ ಹೊಣೆ ಹೊರಬೇಕು. ಜೀವನ ಸಾಗಿಸಲು ಒಂದೆರಡು ಎಕರೆ ಭೂಮಿಯನ್ನು ಐವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಲು ಸರ್ಕಾರಕ್ಕೇನು ಸಮಸ್ಯೆ ಎಂದು ಪ್ರಶ್ನಿಸಿದರು?

ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ಮಾಡಿ ತೋರಿಸುತ್ತಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಕರೆಸಿ ತುರ್ತಾಗಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ರೈತರಿಗೆ ಸಾಗುವಳಿ ಚೀಟಿಗಳನ್ನು ವಿತರಿಸದಿದ್ದರೆ ಕಂದಾಯ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಸಿ.ಪಿ.ಐ. ಮೊಳಕಾಲ್ಮುರು ತಾಲ್ಲೂಕು ಕಾರ್ಯದರ್ಶಿ ಜಾಫರ್‍ಷರೀಫ್ ಮಾತನಾಡುತ್ತ ಲಕ್ಷಾಂತರ ರೈತರು ಜಮೀನು ಉಳುಮೆ ಮಾಡಿಕೊಂಡು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ಧಾರೆ. ಅವೈಜ್ಞಾನಿಕ ಕಾನೂನುಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಬಗರ್‍ಹುಕುಂ ಸಾಗುವಳಿದಾರರನ್ನು ಕಡೆಗಣಿಸುತ್ತ ಕೋಟಿಗಟ್ಟಲೆ ಹಣವನ್ನು ರೈತರಿಂದ ಲೂಟಿ ಮಾಡುತ್ತಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 1490 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ 493 ಅರ್ಜಿಗಳಿಗೆ ಮಾತ್ರ ಹಕ್ಕುಪತ್ರಗಳನ್ನು ನೀಡಲು ತೀರ್ಮಾನಿಸಿದೆ. ಉಳಿದವರಿಗೆ ಏಕೆ ಸಾಗುವಳಿ ಪತ್ರಗಳನ್ನು ಕೊಡಲ್ಲ. ಬಗರ್ ಹುಕುಂ ಸದಸ್ಯರು ಯಾರೆಂಬುದೇ ರೈತರಿಗೆ ಗೊತ್ತಿಲ್ಲ. ನೆಪ ಮಾತ್ರಕ್ಕೆ ಮಾತ್ರ ಬಗರ್ ಹುಕುಂ ಸಮಿತಿ ರಚಿಸಲಾಗಿದೆ ಎಂದು ಆಪಾದಿಸಿದರು.

ಕಂದಾಯ ಇಲಾಖೆ ಅರಣ್ಯ ಇಲಾಖೆ ತಿಕ್ಕಾಟದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರಾಂಪುರ ವ್ಯಾಪ್ತಿಗೆ ಸೇರಿದ ಸರ್ವೆ ನಂ.47 ರಾಂಪುರ, ಸ.ನಂ. 14 ಬಸಾಪುರ

ಸ.ನಂ. 23 ದಡಗೂರು, ಸ.ನಂ. 32 ವಡೇರಹಳ್ಳಿಗೆ ಸಂಬಂಧಿಸಿದ ಅರಣ್ಯ ಹಕ್ಕು ಅರ್ಜಿದಾರರು ಹಾಗೂ ಬಗರ್ ಹುಕುಂ ಅರ್ಜಿ ಹಾಕಿರುವ ರೈತ ಫಲಾನುಭವಿಗಳು ಅತಂತ್ರರಾಗಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆ ಇದುವರೆವಿಗೂ ಗಡಿ ಗುರುತಿಸುವಲ್ಲಿ ವಿಫಲವಾಗಿವೆ. ಅಕ್ರಮ-ಸಕ್ರಮಕ್ಕಾಗಿ ಸಲ್ಲಿಸಿರುವ ಅರ್ಜಿಗಳು ವಜಾಗೊಳ್ಳುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಕೂಡಲೆ ಸಭೆ ಕರೆದು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಸಾಗುವಳಿ ಪತ್ರಗಳನ್ನು ವಿತರಿಸುವಂತೆ ಒತ್ತಾಯಿಸಿದರು.

ದೊಡ್ಡಮಾರಣ್ಣ, ಜಗನ್ನಾಥ, ಗಂಗರಾಜ್, ಶಾಂತಮೂರ್ತಿ, ಮಾರಣ್ಣ, ನಾಗರಾಜ್, ಲಕ್ಷ್ಮಣ, ಕಾಂ.ಈ.ಸತ್ಯಕೀರ್ತಿ, ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ಅಧ್ಯಕ್ಷೆ ಭಾಗ್ಯಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks