ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್ . 12 : ಮೆದೇಹಳ್ಳಿ ರಸ್ತೆಯಲ್ಲಿರುವ ಶಾಂತಾರಾಮ ತೀರ್ಥಾಶ್ರಮದಲ್ಲಿ ಶಾಂತವಧೂತರ ರಾಜಯೋಗಿಸ್ವಾಮಿ ರಾಮತೀರ್ಥರ ಹಾಗೂ ಜಗನ್ಮಾತಾ ಚೂಡಾಮಣಿ ಮಾತಾಜಿಯವರ ಪುಣ್ಯಾರಾಧನೆ ಮತ್ತು ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಕಳಸ ಸ್ಥಾಪನೆ, ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಗುರುಪೂಜೆ, ಪಂಚಾಮೃತಾಭಿಷೇಕ, ಮಹಾ ಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು. ರಥವನ್ನು ಬೃಹಧಾಕಾರವಾದ ಹೂವಿನ ಹಾರ, ಮಲ್ಲಿಗೆ, ಸೇವಂತಿಗೆ, ಕನಕಾಂಬರ, ಗುಲಾಬಿ ಹಾಗೂ ಹಸಿರು ಪತ್ರೆಯಿಂದ ಅಲಂಕರಿಸಲಾಗಿತ್ತು.
ಚಮಾಳ, ತಮಟೆ, ಡೊಳ್ಳು, ಛತ್ರಿ ಚಾಮರ ಬಾಜ ಭಜಂತ್ರಿ ಹಾಗೂ ನಂದಿಕೋಲು ಕುಣಿತ ರಥೋತ್ಸವಕ್ಕೆ ಮೆರಗು ತುಂಬಿತ್ತು. ಮಹಿಳೆಯರು ಪುರುಷರು ಎನ್ನುವ ವ್ಯತ್ಯಾಸವಿಲ್ಲದೆ ಎಲ್ಲರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ನೂರಾರು ಭಕ್ತರು ಕುಣಿದು ಕುಪ್ಪಳಿಸಿದರು. ಕೆಲವರು ಹೆಗಲ ಮೇಲೆ ಚಿಕ್ಕ ಮಕ್ಕಳನ್ನು ಹೊತ್ತು ಡೊಳ್ಳಿನ ಸದ್ದಿಗೆ ಹೆಜ್ಜೆ ಹಾಕುತ್ತಿದ್ದುದು ಆಕರ್ಷಣೀಯವಾಗಿತ್ತು. ಆಶ್ರಮದ ಆವರಣದಲ್ಲಿ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
ಶಾಂತಾರಾಮ ತೀರ್ಥಾಶ್ರಮದ ಪ್ರಹ್ಲಾದ ಸ್ವಾಮೀಜಿ, ಟ್ರಸ್ಟ್ ಕಮಿಟಿ ಸದಸ್ಯರುಗಳಾದ ದೇವರಾಜರೆಡ್ಡಿ, ಗಿರೀಶ್ ರಥೋತ್ಸವದಲ್ಲಿ ಭಾಗವಹಿಸಿದ್ದರು. ರಾಜ್ಯ ಮತ್ತು ಹೊರ ರಾಜ್ಯಗಳ ನಾನಾ ಭಾಗಗಳಿಂದ ಭಕ್ತರು ಪಾಲ್ಗೊಂಡಿದ್ದರು.
ರಥೋತ್ಸವದ ಮುಕ್ತಿ ಭಾವುಟ ಎರಡು ಲಕ್ಷ ರೂ.ಗಳಿಗೆ ಹರಾಜಾಗಿದ್ದು, ವಿಶೇಷವಾಗಿತ್ತು. ಸತೀಶ್‍ಶರ್ಮ ಮತ್ತು ತಂಡದವರಿಂದ ಹೋಮ ನೆರವೇರಿತು.


















