ಬೆಂಗಳೂರು; ಆರ್ಸಿಬಿ ಕಪ್ ಗೆದ್ದ ಖುಷಿಯಲ್ಲಿ ಆರ್ಸಿಬಿ ತಂಡವನ್ನು ನೋಡುವುದಕ್ಕೆ ಜನ ಹೋಗಿದ್ದರು. ವಿಧಾನಸೌಧದ ಮುಂಭಾಗ ನೂಕು ನುಗ್ಗಲು ಪರಿಸ್ಥಿತಿ ನಿರ್ಮಾಣವಾಗಿತ್ತು. ಆರ್ಸಿಬಿ ತಂಡವನ್ನು ನೋಡುವುದಕ್ಕೆ ಇಡೀ ಆರ್ಸಿಬಿ ಅಭಿಮಾನಿಗಳು ಬಂದಿದ್ದರು. ಮಳೆ ಬೇರೆ ಬಂದ ಕಾರಣ, ಜನ ಚೆಲ್ಲಾಪಿಲ್ಲಿಯಾಗಿದ್ದಾರೆ. ಇದರ ಪರಿಣಾಮ ಕಾಲ್ತುಳಿತ ಉಂಟಾಗಿ ಹತ್ತು ಜನ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಅನಾಹುತದ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ದೂಷಿಸಿದೆ. ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದಾಗಿ ಕಾಲ್ತುಳಿತ ಸಂಭವಿಸಿ, ಹಲವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಜನಸಂದಣಿ ನಿಯಂತ್ರಿಸಲು ಯಾವುದೇ ಕ್ರಮಗಳಿಲ್ಲ. ಮೂಲಭೂತ ವ್ಯವಸ್ಥೆಗಳಿಲ್ಲ. ಕೇವಲ ಅವ್ಯವಸ್ಥೆ. ಅಮಾಯಕ ಜನರ ಜೀವ ತೆತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರೀಲ್ ಗಳ ಶೂಟಿಂಗ್ ನಲ್ಲಿ ಮತ್ತು ಕ್ರಿಕೆಟಿಗರೊಂದಿಗೆ ಗಮನ ಸೆಳೆಯುವಲ್ಲಿ ನಿರತರಾಗಿದ್ದರು. ಇದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಸರ್ಕಾರದ ಕೈಗಳ ಮೇಲೆ ರಕ್ತದ ಕಲೆ ಇದೆ ಎಂದು ಟ್ವೀಟ್ ಮೂಲಕ ಬಿಜೆಪಿ ಗುಡುಗಿದೆ.
ನಿನ್ನೆಯಷ್ಟೇ ಮ್ಯಾಚ್ ಮುಗಿದಿತ್ತು. ಇಂದು ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗಿಯೇ ಸೇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಯಾಕಂದ್ರೆ ನಿನ್ನೆ ರಾತ್ರಿಯೇ ಕಪ್ ಗೆಲ್ಲುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಸೆಲೆಬ್ರೇಷನ್ ಜೋರಾಗಿತ್ತು. ಕಂಡ ಕಂಡಲ್ಲಿ ಸಾವಿರಾರು ಜನ ಸೇರಿದ್ದರು. ಇನ್ನು ಕಪ್ ಹಿಡಿದು ಬರುತ್ತೆ ಟೀಂ ಎಂದಾಗ ಆ ಸಂಭ್ರಮವನ್ನ ಕೇಳಬೇಕಾ..? ಅದನ್ನ ನೋಡೋದಕ್ಕೆ ಲಕ್ಷಾಂತರ ಮಂದಿ ಬರ್ತಾರೆ ಅಂತ ಗೊತ್ತಿದ್ದರು ಸರಿಯಾದ ವ್ಯವಸ್ಥೆ ಮಾಡದೆ ಇದ್ದದ್ದು ಸರ್ಕಾರದ್ದೇ ತಪ್ಪು ಎಂದೇ ಎಲ್ಲರೂ ಆಕ್ರೋಶ ಹೊರ ಹಾಕಿದ್ದಾರೆ.


