Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಳೆ ಶಾಲಾ ಪ್ರಾರಂಭೋತ್ಸವ : ಸಂಭ್ರಮದ ಸ್ವಾಗತಕ್ಕೆ ಸಕಲ ಸಿದ್ದತೆ

---Advertisement---

ಚಿತ್ರದುರ್ಗ. ಮೇ 28: ಬೇಸಿಗೆ ರಜೆ ಮುಗಿದು ಶಾಲೆಗಳಿಗೆ ಚಿಣ್ಣರು ಆಗಮಿಸಲು ಕ್ಷಣಗಣನೆ ಆರಂಭವಾಗಿದ್ದು, ಮೇ 29 ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ.

 

ಪ್ರತಿ ವರ್ಷದಂತೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳನ್ನು ವಿನೂತನವಾಗಿ ಸ್ವಾಗತಿಸುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಶಾಲೆಗಳು, ಶಿಕ್ಷಕರು ಸಿದ್ಧಗೊಂಡಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಸೂಚನೆಯಂತೆ ಗುರುವಾರದಿಂದ ಶಾಲೆಗಳು ಬಾಗಿಲು ತೆರೆಯುವುದರಿಂದ ಬುಧವಾರ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಗಳು ಭರದಿಂದ ಸಾಗಿದವು. ಸಿಬ್ಬಂದಿ ಜತೆ ಕೈ ಜೋಡಿಸಿದ ಶಿಕ್ಷಕರು ಶಾಲಾ ಆವರಣ, ತರಗತಿ ಕೋಣೆ, ಅಡುಗೆ ಕೋಣೆ, ಶೌಚಾಲಯ ಹಾಗೂ ನೀರಿನ ಸಿಂಟೆಕ್ಸ್, ಅಡುಗೆ ಪರಿಕರ ಸ್ವಚ್ಛತೆ ಹಾಗೂ ಶಾಲೆಗಳ ಮೇಲ್ಛಾವಣೆ ಮೇಲಿರುವ ಕಸ ತೆಗೆದು ಸ್ವಚ್ಛತೆ ಕಾರ್ಯ ನಡೆಸಿದರು.

ಜಿಲ್ಲೆಯ ವಿವಿಧೆಡೆಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಶಾಲಾ ಪ್ರಾರಂಭಕ್ಕೆ ಸಕಲ ಸಿದ್ಧತೆಗಳು ನಡೆದುವು. ಗ್ರಾಮೀಣ ಭಾಗದಲ್ಲಿ ಮಕ್ಕಳ ಜತೆ  ಗ್ರಾಮಗಳ ಓಣಿ ಓಣಿಗಳಲ್ಲಿ ಸಂಚರಿಸಿದ ಶಿಕ್ಷಕರು ಶಾಲಾ ಪ್ರಾರಂಭ ಹಾಗೂ ವಿಶೇಷ ದಾಖಲಾತಿ ಆಂದೋಲನ ನಡೆಸಿದರು.  ಶಾಲಾ ಕಟ್ಟಡಗಳಿಗೆ ತಳಿರು ತೋರಣ, ರಂಗೋಲಿ ಬಿಡಿಸಿ ಮಕ್ಕಳಿಗೆ ಸಂಭ್ರಮದ ಸ್ವಾಗತದ ಮೂಲಕ ಶಾಲಾ ಪ್ರಾರಂಭೋತ್ಸವದ ಮೊದಲ ದಿನದಿಂದಲೇ ಬಿಸಿ ಊಟ ಹಾಗೂ ಮೊಟ್ಟೆ, ಬಾಳೆಹಣ್ಣು, ರಾಗಿ ಮಾಲ್ಟ್ ವಿತರಿಸಲು ಕ್ರಮವಹಿಸಲಾಗಿದ್ದು, 2025-26ನೇ ಸಾಲಿನಿಂದ ರಾಗಿ ಮಾಲ್ಟ್ ಅನ್ನು ವಾರದ ಐದು ದಿನಗಳ ಕಾಲ ಮಕ್ಕಳಿಗೆ ನೀಡಲು ಶಾಲಾ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.  ಅಲ್ಲದೆ ಈಗಾಗಲೆ ಅಗತ್ಯ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಸರಬರಾಜು ಮಾಡಲು ಸರ್ಕಾರ ಸಾಕಷ್ಟು ಮುಂಚಿತವಾಗಿಯೇ ಕ್ರಮ ಕೈಗೊಂಡಿದೆ.
ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳು ಸೇರಿ ಜಿಲ್ಲೆಯಲ್ಲಿ 1,751 ಸರ್ಕಾರಿ ಶಾಲೆಗಳು, 275 ಅನುದಾನಿತ ಶಾಲೆಗಳು ಹಾಗೂ 390 ಅನುದಾನ ರಹಿತ ಶಾಲೆಗಳು ಇವೆ. 2024-25ನೇ ಸಾಲಿನಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ 27,920 ವಿದ್ಯಾರ್ಥಿಗಳು, ಚಿತ್ರದುರ್ಗ ತಾಲ್ಲೂಕು 24,267 ವಿದ್ಯಾರ್ಥಿಗಳು, ಹಿರಿಯೂರು ತಾಲ್ಲೂಕಿನಲ್ಲಿ 18,877 ವಿದ್ಯಾರ್ಥಿಗಳು, ಹೊಳಲ್ಕೆರೆ ತಾಲ್ಲೂಕಿನಲ್ಲಿ 11,750 ವಿದ್ಯಾರ್ಥಿಗಳು, ಹೊಸದುರ್ಗ ತಾಲ್ಲೂಕಿನಲ್ಲಿ 13,354 ವಿದ್ಯಾರ್ಥಿಗಳು ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 17,663 ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,13,831 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು.

 

ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಗುರುವಾರದಿಂದ ಶಾಲೆಗಳು ವಿದ್ಯುಕ್ತವಾಗಿ ಪ್ರಾರಂಭವಾಗುತ್ತಿವೆ. ಈಗಾಗಲೇ ಶೇ.100ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದೆ. ಮೇ 27 ರಿಂದ ವಿಶೇಷ ದಾಖಲಾತಿ ಆಂದೋಲನ ಪ್ರಾರಂಭವಾಗಿದ್ದು, ಮೇ31 ರವರೆಗೆ ವಿಶೇಷವಾಗಿ ಎಲ್ಲ ಗ್ರಾಮಗಳಲ್ಲಿಯೂ ದಾಖಲಾತಿ ಆಂದೋಲನ ನಡೆಸಲಾಗುವುದು. ಜೂನ್ 02 ರಿಂದ 30 ರವರೆಗೆ ಸಾಮಾನ್ಯ ದಾಖಲಾತಿ ಆಂದೋಲನ ಅನುಷ್ಟಾನ ಮಾಡಲಾಗುವುದು. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರದ ಆಂದೋಲನ ಹಮ್ಮಿಕೊಳ್ಳಲಿದ್ದಾರೆ. ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಿಸಲು ಶಾಲಾ ಪ್ರಾರಂಭದ ದಿನದಿಂದಲೇ ವಿಶೇಷ ಕ್ರಿಯಾ ಯೋಜನೆ ರೂಪಿಸಿಕೊಂಡು ವಿಶೇಷ ತರಗತಿಗಳನ್ನು ನಡೆಸಲಾಗುವುದು ಎನ್ನುತ್ತಾರೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಅವರು.
ಮೆದೇಹಳ್ಳಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಉದ್ಘಾಟನಾ ಕಾರ್ಯಕ್ರಮ: ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2025-26ನೇ ಸಾಲಿನ ಚಿತ್ರದುರ್ಗ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಉದ್ಘಾಟನಾ ಕಾರ್ಯಕ್ರಮ ಇದೇ ಮೇ 29 ರಂದು ಬೆಳಿಗ್ಗೆ 10ಕ್ಕೆ ಚಿತ್ರದುರ್ಗ ತಾಲ್ಲೂಕು ಮೆದೇಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

 

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸುವರು. ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎನ್.ಕಾವ್ಯ ವಿಜಯಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ಆರ್.ಮಂಜುನಾಥ್, ಎಂ.ನಾಸಿರುದ್ದೀನ್, ಬಿಇಒ ಎಸ್.ನಾಗಭೂಷಣ್, ಬಿಆರ್‍ಸಿ ಈ.ಸಂಪತ್ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹೆಚ್.ಗುರುರಾಜ್ ಸೇರಿದಂತೆ ಮೆದೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು  ಭಾಗವಹಿಸುವರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...