ಚಿತ್ರದುರ್ಗ. ಮೇ25 : ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವನ್ನು ಹೆಚ್ಚಿಸಲು ತಾಲ್ಲೂಕಿನಾದ್ಯಂತ ಏಕರೂಪವಾದ ಚಟುವಟಿಕೆಗಳನ್ನು ನಿರ್ವಹಿಸಲು “ಕಲಿಕಾ ಪರ್ವ” ಎಂಬ ಚಟುವಟಿಕೆಗಳ ಕೈಪಿಡಿ ಸಿದ್ಧಪಡಿಸಿದ್ದು, ಎಲ್ಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಶಿಕ್ಷಕರಿಗೆ ಮಾಹಿತಿ ನೀಡಿ ಪರಿಣಾಮಕಾರಿಯಾಗಿ ಅನುಷ್ಠನಗೊಳಿಸಬೇಕು ಎಂದು ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲೆಯ ಬಿಆರ್‍ಸಿ ಕೇಂದ್ರದ ಆವರಣದಲ್ಲಿ ಈಚೆಗೆ ನಡೆದ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಕುರಿತಾಗಿ ಚಿತ್ರದುರ್ಗ ತಾಲ್ಲೂಕಿನ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.
ಎಸ್.ಎಸ್.ಎಲ್.ಸಿ ಫಲಿತಾಂಶವು ಸಹ ಪ್ರಾಥಮಿಕ ಶಿಕ್ಷಣವನ್ನು ಅವಲಂಭಿಸಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರ ಜವಾಬ್ದಾರಿಯನ್ನು ತಿಳಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಈ.ಸಂಪತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಆರ್‍ಪಿ ಕೆ.ಖಲಂದರ್ ಕ್ರಿಯಾಯೋಜನೆಯಲ್ಲಿನ ಅಂಶಗಳನ್ನು ವಿವರಿಸಿದರು. ಬಿಆರ್‍ಪಿ ವಿದ್ಯಾ ಸ್ವಾಗತಿಸಿದರು. ಬಿಆರ್‍ಪಿ ಷಾಹಿನ ಖಾನಂ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಬಿ.ವಿಮಲಾಕ್ಷಿ, ಉಮೇಶಯ್ಯ, ವಾಸಂತಿ ಮತ್ತು ಎಲ್ಲಾ ಸಿಆರ್‍ಪಿಗಳು ಹಾಜರಿದ್ದರು.









