ಬೆಂಗಳೂರು: ಈ ಹಿಂದೆ ಸಿಎಂ ಬೊಮ್ಮಾಯಿ ಅವರು ಭಾವನಾತ್ಮಕವಾಗಿ ಮಾತನಾಡಿದ್ದರು. ನಾನು ಅಳಬಾರದು ಎಂದುಕೊಂಡಿದ್ದೇನೆ ಎಂದು ನುಡಿದಿದ್ದರು. ಇದೀಗ ಆ ಬಗ್ಗೆ ಮಾತನಾಡಿರೋ ಮಾಜಿ ಸಿಎಂ ಕುಮಾರಸ್ವಾಮಿ, ಹೃದಯ ಇದ್ದವರಿಗೆ ಮಾತ್ರ ಅದು ಅರ್ಥವಾಗುತ್ತೆ ಎಂದಿದ್ದಾರೆ.
ಶಿಗ್ಗಾಂವಿಯಲ್ಲಿ ಅವರು ನಾಲ್ಕು ಚುನಾವಣೆಗಳನ್ನು ಸತತವಾಗಿ ಗೆದ್ದಿದ್ದಾರೆ. ಜನ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಆ ಭಾವನೆಗಳು ಸಹಜ. ಹೃದಯ ಇದ್ದವರಿಗೆ ಮಾತ್ರ ಅವರ ಭಾವನೆ ಅರ್ಥವಾಗುತ್ತದೆ. ಆ ಸ್ಥಾನಕ್ಕೆ ಅವರು ಬರಬೇಕಾದರೆ ಆ ಕ್ಷೇತ್ರದ ಜನರೇ ಕಾರಣ. ಹೀಗಾಗಿ ಸಿಎಂ ಅವರು ಭಾವನಾತ್ಮಕವಾಗಿ ಮಾತನಾಡಿರಬಹುದು. ಅದರಲ್ಲಿ ತಪ್ಪೇನಿಲ್ಲ.
ನಾನು ಅನೇಕ ಸಲ ಹೇಳಿದ್ದೇನೆ, ನನಗೆ ರಾಜಕೀಯ ಜನ್ಮ ಕೊಟ್ಟವರು ರಾಮನಗರದ ಜನ ಅಂತ. ಅವರ ಬಗ್ಗೆ ಹೇಳುವಾಗ ನಾನೂ ಭಾವುಕನಾಗಿದ್ದೇನೆ. ಇದು ಮನುಷ್ಯ ಸಹಜ ಗುಣ. ನನ್ನ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ಸಿಎಂ ಬದಲಾವಣೆ ಆಗುತ್ತೆ ಅಂತ ಬೊಮ್ಮಾಯಿ ಅವರು ಹೀಗೆ ಮಾತನಾಡಿದ್ದಾರೆ ಎಂಬುದನ್ನ ನಾನು ಒಪ್ಪಲ್ಲ ಎಂದಿದ್ದಾರೆ.