ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಘಟನೆ ನಡೆದ ರಾತ್ರಿಯೇ ಸಂತೋಷ್ ಲಾಡ್ ಪಹಲ್ಗಾಮ್ ತಲುಪಿದ್ದಾರೆ. ಪ್ರವಾಸಕ್ಕೆಂದು ಕಾಶ್ಮೀರಕ್ಕೆ ತೆರಳಿ ಸಿಲುಕಿಕೊಂಡಿದ್ದ ಕನ್ನಡಿಗರನ್ನು ಕರೆ ತರುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಸಂತೋಷ್ ಲಾಡ್ ಕಂಡು ಕನ್ನಡಿಗರಿಗೂ ನಿಟ್ಟುಸಿರು ಬಿಟ್ಟಂತೆ ಆಗಿದೆ.
ಜಮ್ಮು ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಇಂದು ತಾಯ್ನಾಡಿಗೆ ವಾಪಾಸ್ ಆಗಲಿದ್ದಾರೆ. ಶ್ರೀನಗರದಿಂದ 180 ಜನರ ತಂಡ ಬೆಂಗಳೂರಿಗೆ ವಿಮಾನ ಹತ್ತಿದ್ದಾರೆ. ಬೆಳಗ್ಗೆ 7.30ಕ್ಕೆ ವಿಮಾನವನ್ನ ಹತ್ತಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರುವ ಜವಾಬ್ದಾರಿಯನ್ನು ಸಂತೋಷ್ ಲಾಡ್ ಹೊತ್ತಿದ್ದಾರೆ. ಹೀಗಾಗಿ ತಮ್ಮದೇ ಸ್ವಂತ ಖರ್ಚಿನಲ್ಲಿ ಎಲ್ಲರನ್ನು ಫ್ಲೈಟ್ ಹತ್ತಿಸಿಕೊಂಡು ಬೆಂಗಳೂರಿನ ಕಡೆಗೆ ಹೊರಟಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಮೃತರ ಕುಟುಂಬಸ್ಥರಿಗೆ ಪರಿಹಾರವನ್ನ ಘೋಷಣೆ ಮಾಡಿದ್ದಾರೆ. ಕರ್ನಾಟಕ ಇಬ್ಬರು ಮರಣ ಹೊಂದಿದ್ದು, ತಲಾ ಹತ್ತು ಲಕ್ಷ ಪರಿಹಾರ ನೀಡಿದ್ದಾರೆ.
ಈಗಾಗಲೇ ಮೃತದೇಹಗಳು ಕೂಡ ತಲುಪಿವೆ. ಮಂಜುನಾಥ್ ಮೃತದೇಹ ಶಿವಮೊಗ್ಗ ಕಡೆಗೆ ಹೊರಟಿದ್ರೆ, ಭರತ್ ಮೃತದೇಹ ಬೆಂಗಳೂರಿನ ಮತ್ತಿಕೆರೆ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕುಟುಂಬಸ್ಥರಿಗಂತು ಮಕ್ಕಳನ್ನು ಕಳೆದುಕೊಂಡ ದುಃಖ ತಡೆದುಕೊಳ್ಳಲಾಗುತ್ತಿಲ್ಲ. ಅತ್ತ ಮಂಜುನಾಥ್ ಇತ್ತ ಭರತ್ ಮನೆಯಲ್ಲಿ ಕಣ್ಣೀರಿನ ಕೋಡಿ ಹರಿದಿದೆ. ದುಃಖದ ಕಟ್ಟೆ ಹೊಡೆದು, ಗೋಳಿಡುತ್ತಿದ್ದಾರೆ. ಅವರನ್ನ ಸಮಾಧಾನ ಮಾಡುವುದಕ್ಕೂ ಸಂಬಂಧಿಕರಿಗೆ ಕಷ್ಟ ಸಾಧ್ಯವಾಗಿದೆ. ಇನ್ನು ಶಿವಮೊಗ್ಗದಲ್ಲಿ ಮಂಜುನಾಥ್ ಮೃತದೇಹದ ಅಂತಿಮ ದರ್ಶನಕ್ಕೆ ನೂರಾರು ಜನ ಸೇರುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿನ ಜಿಲ್ಲಾಡಳಿತ ಹಾಗೂ ಪಾಲಿಕೆ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ.










