Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡ ಶ್ರೀ ಸಿದ್ದೇಶ್ವರನ ರಥೋತ್ಸವ

---Advertisement---

ಸುದ್ದಿಒನ್, ಹಿರಿಯೂರು, ಏಪ್ರಿಲ್. 14  : ತಾಲೂಕಿನ ಐಮಂಗಲ ಹೋಬಳಿಯ ಸುಪ್ರಸಿದ್ದ ಶ್ರೀ ಕ್ಷೇತ್ರ ವದ್ದೀಕೆರೆಯ ಕಾಲಭೈರವೇಶ್ವರ ಸ್ವಾಮಿ ಯಾನೆ ಶ್ರೀ ಸಿದ್ದೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ಲಕ್ಷಾಂತರ ಭಕ್ತರ ನಡುವೆ ಸೋಮವಾರ ಸಂಜೆ 5:20ರ ಸಮಯಕ್ಕೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಬಿಸಿಲಿನ ಬೇಗೆಯ ಪರಿವೇ ಇಲ್ಲದೆ ಲಕ್ಷಾಂತರ ಭಕ್ತರು ಸೇರಿದ್ದು ಸಿದ್ದೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವವನ್ನು ಕಣ್ತುಂಬಿಕೊಂಡರು. ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಹೂವಿನ ಪಲ್ಲಕ್ಕಿಯಲ್ಲಿ ಸ್ವಾಮಿಯನ್ನು ಪ್ರತಿಷ್ಟಾಪನೆ ಮಾಡಿಕೊಂಡು ಬಂದು ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ ರಥದಲ್ಲಿ ಕೂರಿಸಲಾಯಿತು. ಸ್ವಾಮಿಯು ರಥದಲ್ಲಿ ಕೂರಿಸುವಾಗ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ರಥೋತ್ಸವಕ್ಕೆ ಮುಜರಾಯಿ ಇಲಾಖೆ ಅಧಿಕಾರಿ ತಹಶೀಲ್ದಾರ್ ಸಿ. ರಾಜೇಶ್ ಕುಮಾರ್ ಚಾಲನೆ ನೀಡಿದರು. ಬಳಿಕ ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿಭಾವದ ಸಮರ್ಪಣೆ ಅರ್ಪಿಸಿದರು. ವಿವಿಧ ರೀತಿಯ ಹೂವುಗಳು ಮತ್ತು ಹಾರಗಳಿಂದ ಸಿಂಗಾರಗೊಂಡಿದ್ದ ರಥ ನೋಡುಗರ ಕಣ್ಮನ ಸೆಳೆಯುವಂತಿತ್ತು.

ಬಿಸಿಲಲ್ಲೂ ಕದಲದೇ ನಿಂತ ಸಾವಿರಾರು ಭಕ್ತರು ತಮ್ಮ ಹರಕೆಗಳನ್ನು ಸಮರ್ಪಿಸಿದರು. ಬಾಳೆಹಣ್ಣು, ಹೂವು, ಉತ್ತುತ್ತಿ ಹಣ್ಣುಗಳನ್ನು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭಕ್ತರು ಎಸೆಯುವ ದೃಶ್ಯ ಸಾಮಾನ್ಯವಾಗಿತ್ತು. ಆಟೋ, ಟಾಟಾ ಎಸಿ, ಬೈಕುಗಳು, ಕಾರು ಹೀಗೆ ಸಾವಿರಾರು ವಾಹನಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿಯ ರಥೋತ್ಸವವನ್ನು ವೀಕ್ಷಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ರಸ್ತೆಯ ಇಕ್ಕೆಲಗಳಲ್ಲಿ ಜಾತ್ರೆಗೂ ಮುನ್ನವೇ ಬಂದು ಬಿಡಾರ ಹೂಡಿದ್ದ ಬೆಂಡು, ಬೆತ್ತಾಸು, ಮಕ್ಕಳ ಆಟಿಕೆ ಸಾಮಾನುಗಳ ಅಂಗಡಿಗಳು, ಬಳೆ ಅಂಗಡಿಗಳು ಸೇರಿದಂತೆ ವಿವಿಧ ರೀತಿಯ ಸಿಹಿ ತಿನಿಸುಗಳ ಅಂಗಡಿಗಳು ಜಾತ್ರೆಯ ಸೌಂದರ್ಯ ಹೆಚ್ಚಿಸಿದ್ದವು. ರಾಜ್ಯದ ಚಿತ್ರದುರ್ಗ, ತುಮಕೂರು, ದಾವಣಗೆರೆ ಅಲ್ಲದೆ ನೆರೆಯ ರಾಜ್ಯದಿಂದಲೂ ಭಕ್ತರು ಆಗಮಿಸಿದ್ದು ಈ ಭಾಗದ ಶಕ್ತಿಶಾಲಿ ದೇವರಾದ ವದ್ದೀಕೆರೆ ಸಿದ್ದೇಶ್ವರನ ಜಾತ್ರೆ ಸೂಕ್ತ ವ್ಯವಸ್ಥೆ ಮತ್ತು ಮುಂಜಾಗರುಕತೆಯ ಕ್ರಮಗಳಿಂದ ಅದ್ದೂರಿಯಾಗಿ ಜರುಗಿತು. ಜಾತ್ರೆಯ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ತಹಶೀಲ್ದಾರ್ ರಾಜೇಶ್ ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಕೆ ಅಭಿನಂದನ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಬಿಜೆಪಿ ಮಾಜಿ ಅಧ್ಯಕ್ಷ ವಿಶ್ವನಾಥ್,
ಅರ್ಚಕ ಭಾನು ಪ್ರಕಾಶ್, ಮುಜರಾಯಿ ಇಲಾಖೆ ಅಧಿಕಾರಿಗಳು, ದೇವಾಲಯ ಸಮಿತಿಯವರು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment