ಚಿತ್ರದುರ್ಗ ಏ. 14 : ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ “ಶಿಕ್ಷಣ-ಸಂಘಟನೆ-ಹೋರಾಟ” ಎಂಬ ಮೂರು ಸಿದ್ಧಾಂತಗಳನ್ನು ನಾವೆಲ್ಲರೂ ಪಾಲಿಸಬೇಕಾದ ಜೀವನದ ಮಂತ್ರವಾಗಿವೆ. ಶಿಕ್ಷಣದಿಂದ ಜ್ಞಾನ, ಹೋರಾಟದಿಂದ ಹಕ್ಕುಗಳು, ಸಂಘಟನೆಯಿಂದ ಶಕ್ತಿ ಪಡೆದುಕೊಳ್ಳುವ ಮಾರ್ಗದಲ್ಲಿ ನಡೆಯುವುದು ನವ ಭಾರತ ನಿರ್ಮಾಣದ ಪ್ರಥಮ ಹೆಜ್ಜೆಯಾಗಿದೆ ಎಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ತ.ರಾ.ಸು. ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಲಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ಕೇವಲ ಸಮಾಜಸೇವಕರಲ್ಲ, ಅವರು ಭಾರತದ ಪುನರ್ ನಿರ್ಮಾಣಕ್ಕೆ ಕೊಡುಗೆ ನೀಡಿದ ಮಹಾತ್ಮ. ಶೋಷಿತರಿಗೆ ಧೈರ್ಯ, ಶಿಕ್ಷಣ, ಆತ್ಮಗೌರವ ಮತ್ತು ನ್ಯಾಯದ ಮಾರ್ಗವನ್ನು ತೋರಿದ ದಾರಿದೀಪ. ಅವರ ಜೀವನದ ಪ್ರಮುಖ ಕೊಂಡಿಯಾಗಿದ್ದು ಭಾರತದ ಸಂವಿಧಾನ. ಅವರು ಅಧ್ಯಕ್ಷರಾಗಿದ್ದ ಕರಡು ಸಮಿತಿಯ ಮಾರ್ಗದರ್ಶನದಲ್ಲಿ ರೂಪುಗೊಂಡ ನಮ್ಮ ಸಂವಿಧಾನವು ಸಮಾನತೆ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ ಮತ್ತು ವ್ಯಕ್ತಿಗತ ಹಕ್ಕುಗಳನ್ನು ನಮ್ಮೆಲ್ಲರಿಗೂ ನೀಡುವ ಪವಿತ್ರ ಗ್ರಂಥವಾಗಿದೆ.
12ನೇ ಶತಮಾನದಲ್ಲಿ ಈ ಭೂಮಿಯಲ್ಲಿ ಸಮಾನತೆಯ ಸಂದೇಶ ಸಾರಿ ಹೋಗಿದ್ದ ಮಹಾ ಮಾನವತಾವಾದಿ ಬಸವಣ್ಣ ಮತ್ತು 20ನೆಯ ಶತಮಾನದಲ್ಲಿ ಅದೇ ಸಂದೇಶವನ್ನು ಜಾರಿಗೊಳಿಸಿದ ಡಾ|| ಬಾಬಾ ಸಾಹೇಬ ಅಂಬೇಡ್ಕರ್ ಇಬ್ಬರಲ್ಲೂ ಹಲವು ಸಾಮ್ಯತೆಗಳು ಕಾಣುತ್ತವೆ. ಇಬ್ಬರದು ಧ್ಯೆಯ, ಉದ್ದೇಶ ಒಂದೇ ಆಗಿತ್ತು, ಸಮಾಜದಲ್ಲಿ ಮೇಲು, ಕೀಳು ಎನ್ನುವ ಭಾವನೆ ಇರಬಾರದು, ಎಲ್ಲರಿಗೂ ಬದುಕಿನ ಹಕ್ಕು ಸಮಾನವಾಗಿ ಸಿಗಬೇಕು. ನೈಸರ್ಗಿಕ ಸಂಪನ್ಮೂಲಗಳ ಬಳಕೆಗೆ ಸಮಾನ ಅಧಿಕಾರವಿರಬೇಕು, ಎಲ್ಲಾ ಹಕ್ಕುಗಳು ಸಮಾನವಿರಬೇಕು ಎನ್ನುವ ಉದ್ದೇಶದೊಂದಿಗೆ ಅರಿವಿನ ಸಮಾಜ ನಿರ್ಮಿಸಿ, ಹೊಸ ಬೆಳಕನ್ನು ಕಾಣುವ ಹೊಸ ಕನಸು ಹೊತ್ತವರು ಡಾ. ಅಂಬೇಡ್ಕರ್ ಅವರು ಎಂದರು.
ಸಮಾಜದಲ್ಲಿನ ಅಸಮಾನತೆಗಾಗಿ ಅಂಬೇಡ್ಕರ್ ಅವರಿಗೆ ಬಹಳ ದೊಡ್ಡಮಟ್ಟದ ಅಸಮಾಧಾನವಿತ್ತು, ಆದರೆ ಅದಕ್ಕಾಗಿ ಅವರೆಂದೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಅಹಿಂಸೆಯ ಮಾರ್ಗ ತುಳಿಯಲಿಲ್ಲ ಅತ್ಯಂತ ಸಮಾಧಾನದಿಂದಲೇ ಅರಿವು ಮೂಡಿಸಲು ಪ್ರಯತ್ನಿಸಿದರು, ಅದೇ ತತ್ವದ ಆಧಾರದ ಮೇಲೆ ಸಂವಿಧಾನವನ್ನು ರಚಿಸಿದರು. ಅವರ ಜೀವಿತದುದ್ದಕ್ಕೂ ಯಾರನ್ನೂ ದ್ವೇಷಿಸಲಿಲ್ಲ, ಯಾರ ಹಕ್ಕುಗಳನ್ನು ಅಧಿಕಾರವನ್ನು, ಅವರು ಕಸಿದುಕೊಳ್ಳಲು ಬಯಸಿರಲಿಲ್ಲ. ಮನುಷ್ಯನಾಗಿ ಹುಟ್ಟಿದವರು ಹೇಗೆ ಬದುಕಬಹುದು ಎಂದು ತೋರಿಸುವ ಮೂಲಕ ಇಡೀ ಮಾನವ ಕುಲಕ್ಕೆ ಆದರ್ಶರಾದರು. ಕಾನೂನು ತಜ್ಞರಾಗಿ ಸಮಾಜ ಸುಧಾರಕರಾಗಿ ಅರ್ಥ ಶಾಸ್ತ್ರಜ್ಞರಾಗಿ, ಪತ್ರಕರ್ತರಾಗಿ, ತತ್ವಜ್ಞಾನಿಯಾಗಿ, ಸಾಹಿತಿಯಾಗಿ ತಮ್ಮ ಇರುವಿಕೆಯನ್ನು ತೋರ್ಪಡಿಸಿದರು. ಹಾಗಾಗಿ ಅವರ ಹೆಸರೇ ನಮಗೆಲ್ಲಾ ಸ್ಪೂರ್ತಿ, ಸಾಧನೆಗೆ ಪ್ರೇರಣೆ, ಅವರ ಬದುಕು ತತ್ವ ಆದರ್ಶಗಳು ನಮ್ಮೆಲ್ಲರ ಪಾಲಿಗೆ ಸರ್ವಕಾಲಿಕ ಮಾರ್ಗದರ್ಶಕ. ಸಮಾನತೆಯಿಂದಲೆ ಪ್ರಗತಿ ಎನ್ನುವುದು ಅವರ ಪರಮೋಚ್ಚ ನಂಬಿಕೆಯಾಗಿತ್ತು ಎಂದರು.
ಅಂಬೇಡ್ಕರ್ ಅವರ ಕನಸಿನಂತೆ, ಎಲ್ಲಾ ಹಂತಗಳಲ್ಲಿಯೂ ಶಿಕ್ಷಣ-ಸಮಾನತೆಯನ್ನು ನೀಡುವಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಕಂಕಣ ಬದ್ಧವಾಗಿದೆ. ಅಂಬೇಡ್ಕರ್ ಜಯಂತಿ ಎನ್ನುವುದು ಕೇವಲ ಪುμÁ್ಪರ್ಚನೆಗೆ ಸೀಮಿತವಾಗಬಾರದು. ಇದು ಪ್ರತಿಜ್ಞಾ ದಿನವಾಗಬೇಕು, ನಾವು ಜಾತಿಯ ಹೆಸರಿನಲ್ಲಿ ನಡೆಯುವ ಯಾವುದೇ ಹಿಂಸೆಯನ್ನು ವಿರೋಧಿಸೋಣ. ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ, ಮಹಿಳೆಯರಿಗೆ ಗೌರವ, ದಲಿತರಿಗೆ ಸವಲತ್ತು, ಪರಿಶ್ರಮಿಕರಿಗೆ ಪರಿಗಣನೆ, ಎಲ್ಲ ವರ್ಗದ ಜನತೆಗೆ ಸನ್ಮಾನ, ಈ ಎಲ್ಲವನ್ನು ನಾವು ಕಲ್ಪಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, 1927 ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಧೃಢ ನಿರ್ಧಾರ ಕೈಗೊಂಡು ಮನಸ್ಮøತಿ ಎನ್ನುವ ಅಲಿಖಿತ ಸಂವಿಧಾನವನ್ನು ಸುಟ್ಟು ಹಾಕಿದರು. ವಿದ್ಯಾಭ್ಯಾಸದಿಂದ ಅಂಬೇಡ್ಕರ್ ಗಳಿಸಿದ ವಿದ್ವತ್ ಇಂತಹ ಧೃಡ ನಿರ್ಧಾರ ಕೈಗೊಳ್ಳಲು ಕಾರಣವಾಯಿತು. ಬಹಳಷ್ಟು ಜನರು ಇದನ್ನು ವಿರೋಧಿಸಿದರು. ದೇಶದ ಸಂವಿಧಾನ ರಚನೆ ಮಾಡಿ, ದೇಶದಲ್ಲಿ ಜಾರಿಯಾದ ಮೇಲೂ ಅಂಬೇಡ್ಕರ್ ರಚಿಸಿದ ಸಂವಿಧಾನ ಒಪ್ಪದಂತೆ ವಿರೋಧಿಸಿ ಅಂದಿನ ಕಾಲದಲ್ಲಿ ಚಳುವಳಿಯನ್ನು ಸಹ ನಡೆಸಲಾಯಿತು. ಇಂದಿಗೂ ಸಂವಿಧಾನವನ್ನು ಬದಲಾವಣೆ ಮಾಡುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ. ಸಂವಿಧಾನವನ್ನು ರಕ್ಷಿಸಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಸಂವಿಧಾನ ರಚಿಸಿ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದವರು ಡಾ.ಬಿ.ಆರ್.ಅಂಬೇಡ್ಕರ್, ದೇಶದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಯಕೀಯ ಸಮಾನತೆ ಮೂಡಬೇಕು ಎನ್ನುವುದು ಅವರ ಆಶಯವಾಗಿತ್ತು. ಇಂದು ಮಹಿಳೆಯರಿಗೆ ಸ್ವಾತಂತ್ರ್ಯ ದೊರಕಲು ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣವಾಗಿದ್ದಾರೆ. ಭಾರತ ದೇಶ ಇಂದು ಆಧುನಿಕವಾಗಿ ಪ್ರಗತಿ ಹೊಂದಲು ಅಂಬೇಡ್ಕರ್ ಅವರ ಕೊಡುಗೆ ಮಹತ್ವÀದ್ದಾಗಿದೆ. ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಗುತ್ತಿಗೆಯಲ್ಲೂ ಮೀಸಲಾತಿ ನೀಡಿದೆ. ಅಂಬೇಡ್ಕರ್ ಅವರ ಆಶಯ ಈಡೇರಿಸುವಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ಪೀರ್ ಮಾತನಾಡಿ, ಅಂಬೇಡ್ಕರ್ ನೀಡಿದ ಸಂವಿಧಾನದಿಂದಲೇ ಇಂದು ನಾವೆಲ್ಲರೂ ಜಾತಿ ಪದ್ದತಿ ಮೀರಿ, ವಿದ್ಯಾಭ್ಯಾಸ ಹೊಂದಿ ಉನ್ನತ ಸ್ಥಾನಗಳನ್ನು ಅಲಂಕರಿಸುವಂತಾಗಿದೆ. ಇಡೀ ದೇಶವನ್ನು ಒಗ್ಗೂಡಿಸಿ ಮುನ್ನಡೆಸುವ ಅಂಬೇಡ್ಕರ್ ರಚಿಸಿದ ಶಕ್ತಿ ಸಂವಿಧಾನಕ್ಕೆ ಇದೆ ಎಂದರು.
ಚಳ್ಳಕೆರೆ ಕೋಟೆ ಬೋರಮ್ಮ ಪಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಸಂಜೀವ್ ಕುಮಾರ್ ಪೋತೆ ಮಾತನಾಡಿ, ಜಾತಿ ಪದ್ದತಿಯ ಕಷ್ಟ ಕಾರ್ಪಣ್ಯಗಳನ್ನು ಮೀರಿ ಅಂಬೇಡ್ಕರ್ ಸಾಧನೆ ಮಾಡಿದ್ದಾರೆ. ಸೈದ್ದಾಂತಿಕವಾಗಿ ಅಂಬೇಡ್ಕರ್ ಮನುವಾದವನ್ನು ವಿರೋಧಿಸಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳ ಬಗ್ಗೆ ಅಂಬೇಡ್ಕರ್ ಎಂದೂ ವಿರೋಧ ವ್ಯಕ್ತ ಪಡಿಸಿರಲಿಲ್ಲ. ಅಂಬೇಡ್ಕರ್ ವಿಶ್ವದ ಅತ್ಯುತನ್ನತ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದಾರೆ. ಅವರ ಸಲಹೆ ಮೇರೆಗೆ ಬ್ರಿಟೀಷ್ ಆಡಳಿತದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಲಾಯಿತು. ಕಾರ್ಮಿಕ ಸಚಿವರಾಗಿ ಕಾರ್ಮಿಕರಿಗೆ 8 ಗಂಟೆಗಳ ಕೆಲಸದ ಅವಧಿ ನಿಗಧಿ, ಐ.ಎಸ್.ಐ ಸೌಲಭ್ಯ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಪೂರ್ವ ಹಾಗೂ ನಂತರದಲ್ಲಿ ರಜೆ ಸೌಲಭ್ಯಗಳನ್ನು ಕಲ್ಪಿಸಿದರು. ಉತ್ತಮ ದೂರದರ್ಶಿತ್ವ ಹೊಂದಿದ್ದ ಅಂಬೇಡ್ಕರ್ ದಾಮೋದರ್ ಕಣಿವೆ ನೀರಾವರಿ ಯೋಜನೆ, ಹಿರಾಕುಡ್ ಅಣೆಕಟ್ಟು ನಿರ್ಮಾತೃವಾಗಿದ್ದಾರೆ. ಅಂಬೇಡ್ಕರ್ ಸಾಕಷ್ಟು ಹೋರಾಟಗಳನ್ನು ನಡೆಸಿ ವಿಮೋಚನಾ ಎಂಬ ರಥವನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದ್ದಾರೆ. ಈ ವಿಮೋಚನಾ ರಥವನ್ನು ನಾವೆಲ್ಲರೂ ಮುಂದೆ ತೆಗೆದುಕೊಂಡು ಹೋಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ರಂಗಮಂದಿರದಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕ ವೀರೇಂದ್ರ ಪಪ್ಪಿ ಸೇರಿದಂತೆ ಎಲ್ಲ ಗಣ್ಯಮಾನ್ಯರು ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿ ಭಾರತ ಸಂವಿಧಾನದ ಪೀಠಿಕೆಯನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಇದೇ ಸಂದರ್ಭದಲ್ಲಿ ಬೋಧಿಸಿದರು.
ವಿವಿಧ ಸಂಘಟನೆಗಳ ಮೂಲಕ ಸಮಾಜದ ಏಳಿಗೆಗಾಗಿ ಹೋರಾಟ ನಡೆಸಿ, ಜನಸೇವೆಗೈದ ಪರಿಶಿಷ್ಟ ಜಾತಿಯ ವಿವಿಧ ಮುಖಂಡರುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಕೂಡ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್, ನಗರಸಭೆ ಪೌರಾಯುಕ್ತೆ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಲಿಡ್ಕರ್ ಮಾಜಿ ಅಧ್ಯಕ್ಷ ಶಂಕರ್, ಮುಖಂಡರುಗಳಾದ ರಾಜಣ್ಣ, ನಿರಂಜನಮೂರ್ತಿ, ಬಾಳೆಕಾಯಿ ಶ್ರೀನಿವಾಸ್, ಸಿ.ಹೆಚ್. ಮಂಜುನಾಥ್, ತಿಪ್ಪೇಸ್ವಾಮಿ, ಹೆಚ್. ಮಹಾಂತೇಶ್, ಕೆ.ಟಿ. ಶಿವಕುಮಾರ್, ವೈ. ರಾಜಣ್ಣ ತುರುವನೂರು, ಎಂ. ಶಿವಮೂರ್ತಿ, ಪಾಂಡುರಂಗಪ್ಪ, ಕೈನಡು ಚಂದ್ರಣ್ಣ, ನಾಗಭೂಷಣ್, ನರಸಿಂಹರಾಜು, ಸೋಮಶೇಖರ್, ಸಮೀವುಲ್ಲಾ ಮುಂತಾದವರು ಪಾಲ್ಗೊಂಡಿದ್ದರು.




