ಮೈಸೂರು: ಪರಿಷತ್ ಚುನಾವಣೆಯ ಹಿನ್ನೆಲೆ ಜಿಲ್ಲೆಗೆ ಭೇಟಿ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ.

ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 2018 ರಿಂದ ಇದೇ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಕುತ್ತಿಗೆಗೆ ಸ್ಲೇಟ್ ಹಾಕಿಕೊಂಡು ಓಡಾಡಲಿ. ತಮ್ಮ ಕುತ್ತಿಗೆಗೆ ಈ ಸ್ಲೇಟ್ ಹಾಕಿಕೊಂಡು ಓಡಾಡಲಿ. ಪದೇ ಪದೇ ಇದೆ ಹೇಳಿಕೆ ನೀಡಿ ಬಾಯಿ ನೋಯಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದು ಸಿದ್ದರಾಮಯ್ಯಗೆ ತಿರುಗು ಬಾಣವಾಗಿ ಜೆಡಿಎಸ್ಗೆ ಲಾಭವಾಗಲಿದೆ. ಬಿಜೆಪಿ ಬೆಂಬಲಿಗರ ಮತ ಜೆಡಿಎಸ್ ಗೆ ಬರಲಿದೆ ಎಂದಿದ್ದಾರೆ.

ಕುಟುಂಬ ರಾಜಕಾರಣ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಮಗ ಶಾಸಕರಾಗಿದ್ದಾರೆ. ಅಕಾಲಿಕ ಮರಣಕ್ಕೀಡಾದ ಮಗ ಕೂಡ ರಾಜಕಾರಣದಲ್ಲಿದ್ದರು. ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತಾಡ್ತಾರೆ. ಪರಿಷತ್ ಚುನಾವಣೆಯಲ್ಲಿ ಯಾರ ಬೆಂಬಲವನ್ನು ಕೇಳಲ್ಲ. ನಮ್ಮ ಅಭ್ಯರ್ಥಿಗಳು 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಅಷ್ಟು ಕ್ಷೇತ್ರಗಳಲ್ಲೂ ಕೇಳಲ್ಲ. ಅವರ ಅಭ್ಯರ್ಥಿ ಸೋಲಿಸಿ ಬೆಂಬಲ ಕೊಡಿ ಎನ್ನಲ್ಲ. 2023ರ ಚುನಾವಣೆ ಗಮನದಲ್ಲಿಟ್ಟುಕೊಂಡು ಬೆಂಬಲ ನೀಡ್ತೇವೆ ಎಂದಿದ್ದಾರೆ.


