ಜ್ಞಾನ ಸಂಭ್ರಮ ಕಾರ್ಯಕ್ರಮ : ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರಿಂದ ಆಶೀರ್ವಚನ

suddionenews
2 Min Read

 

ಸುದ್ದಿಒನ್, ಚಿತ್ರದುರ್ಗ, ಜನವರಿ. 24 : ಶರಣರ ತಮ್ಮ ವಚನಗಳಲ್ಲಿ ನಾವು ಅನೇಕ ಆಧುನಿಕ ವೈಜ್ಞಾನಿಕ ಅಂಶಗಳನ್ನು ಗುರುತಿಸಬಹುದು. ಅಂದಿನ ಶರಣರು ಸಾಮಾಜಿಕ, ಆಧ್ಯಾತ್ಮಿಕ ಸುಧಾರಣೆಗೆ ಒತ್ತು ನೀಡಿದ ಹಾಗೆ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳತ್ತಲೂ ಹೆಚ್ಚಿನ ಒಲವನ್ನು ತೋರಿದ್ದರು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ತಿಳಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಎಸ್.ಜೆ.ಎಸ್.ಸಮೂಹ ಸಂಸ್ಥೆ ಆಯೋಜಿಸಿದ್ದ ಜ್ಞಾನ ಸಂಭ್ರಮ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ವಿಜ್ಞಾನ ಮತ್ತು ಆಧ್ಯಾತ್ಮಿಕತೆಯು ಒಂದೇ ಸತ್ಯವನ್ನು ಎರಡು ರೀತಿಯಲ್ಲಿ ಕಾಣುವುದು. ಬ್ರಹ್ಮಾಂಡ ಮತ್ತು ಪಿಂಡಾಂಡ, ಬಾಹ್ಯ ಜಗತ್ತು ಮತ್ತು ಆಂತರಿಕ ಜಗತ್ತು ಎಂಬ ಎರಡು ಜಗತ್ತುಗಳಿವೆ. ಅನುಭವದಿಂದ ಈ ಎರಡು ಕ್ಷೇತ್ರಗಳಿಂದಲೂ ನಮಗೆ ಸತ್ಯ ದೊರಕುವುದು. ಆಂತರಿಕ ಅನುಭವದಿಂದ ಸಂಗ್ರಹಿಸಿರುವುದೇ ಮನಶಾಸ್ತ್ರ , ತತ್ವಶಾಸ್ತ್ರ ಮತ್ತು ಧರ್ಮ. ಬಾಹ್ಯ ಜಗತ್ತಿನಿಂದ ನಮಗೆ ಭೌತವಿಜ್ಞಾನಗಳು ದೊರಕುವವು. ಪೂರ್ಣವಾದ ಸತ್ಯವು ಎರಡು ಕ್ಷೇತ್ರಗಳಿಂದ ಬರುವ ಅನುಭವಗಳಿಗೆ ವಿರೋಧವಿಲ್ಲದೆ ಇರಬೇಕು. ಪಿಂಡಾಂಡವು ಬ್ರಹ್ಮಾಂಡಕ್ಕೆ ಪ್ರಮಾಣವಾಗಿರಬೇಕು. ಸತ್ಯವು ಯಾವ ಕ್ಷೇತ್ರಕ್ಕೆ ಸೇರಿದ್ದರು ಪರಸ್ಪರ ವಿರೋಧಗಳಿರುವುದಿಲ್ಲ ಆಂತರಿಕ ಸತ್ಯಕ್ಕೂ ಬಾಹ್ಯ ಸತ್ಯಕ್ಕೂ ಪರಸ್ಪರ ವಿರೋಧವಿಲ್ಲ ಎಂದರು.

ಶರಣರ ವಚನಗಳಲ್ಲಿ ಸಸ್ಯ ವಿಜ್ಞಾನ, ಮಾನವೀಯ ವಿಜ್ಞಾನ, ನೈತಿಕ ವಿಜ್ಞಾನ, ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ಮನೋವಿಜ್ಞಾನ, ಪ್ರಾಕೃತಿಕ ವಿಜ್ಞಾನ ಹೀಗೆ ಏನೆಲ್ಲವೂ ಮೇಳೈಸಿವೆ. ಶರಣರು ವಿಜ್ಞಾನದ ಜ್ಞಾನದ ಜೊತೆಗೆ ಇನ್ನೂ ಮಹತ್ವದ ಜ್ಞಾನವನ್ನು ಹೇಳಿದ್ದಾರೆ.

ಕಾಯವಿದ್ದು ಕಾಬುದು ವಿಜ್ಞಾನ.
ಜೀವವಿದ್ದು ಕಾಬುದು ಸುಜ್ಞಾನ.
ಎರಡಳಿದು ತೋರಿಕೆಯಲ್ಲಿ ಕಾಬುದು ಪರಂಜ್ಯೋತಿಜ್ಞಾನ. ಇಂತೀ ಮೂರು ಮುಖವ ಏಕವ ಮಾಡಿ ಬೇರೊಂದು ಕಾಬುದು ಪರಮಪ್ರಕಾಶಜ್ಞಾನ. ಇಂತೀ ಅಂತರ ಪಟಂತರದಲ್ಲಿ ನಿಂದು ನೋಡುವ ಸಂದೇಹವ ಹರಿದ ಸಂದಿನಲ್ಲಿ ಕುಂದದ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ ಎಂದು ಶ್ರೀಗಳು ತಿಳಿಸಿದರು.

ಜೀವನದಲ್ಲಿ ವಿಜ್ಞಾನದ ಪ್ರಸ್ತುತತೆಯ ಬಗ್ಗೆ ಚಿತ್ರದುರ್ಗ ಸೈನ್ಸ್ ಫೌಂಡೇಷನ್‍ನ ಹೆಚ್.ಎಸ್.ಟಿ ಸ್ವಾಮಿ ಮಾತನಾಡಿ, ಮಾನವ ಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿದೆ, ವಿಜ್ಞಾನ ಇಲ್ಲದೆ ಜೀವನ ಇಲ್ಲ ಎಂಬಂತಾಗಿದೆ. ಮಾನವ ಜೀವನದಲ್ಲಿ ವಿಜ್ಞಾನದ ಉಪಯೋಗ ಬಹಳ ಇದೆ, ಆದರೂ ಸಹಾ ಇದರ ಬಗ್ಗೆ ಅರಿವು ಇಲ್ಲದ ಮಾನವರು ವಿಜ್ಞಾನವನ್ನು ದೂರುತ್ತಿದ್ದಾರೆ. ಅಸಡ್ಡೆ ಮಾಡುತ್ತಿದ್ದಾರೆ. ವಿಜ್ಞಾನದ ಬಗ್ಗೆ ಸರಿಯಾದ ರೀತಿಯಲ್ಲಿ ತಿಳಿಯದವರು ಈ ರೀತಿಯಾಗಿ ಮಾಡುತ್ತಿದ್ದಾರೆ ಎಂದು ದೂರಿದರು.

ವಿಜ್ಞಾನಿಗಳು ನಮಗೆ ನೀಡಿದ ಕೂಡುಗೆಯನ್ನು ದಿನ ನಿತ್ಯ ನಾವುಗಳು ಉಪಯೋಗ ಮಾಡುತ್ತೇವೆ, ಆದರೂ ಸಹಾ ಜನತೆ ಮೂಢನಂಭಿಕೆಯನ್ನು ಆಚರಣೆ ಮಾಡುತ್ತಾರೆ. ಅಜ್ಞಾನದ ದಾಸರಾಗಿದ್ದಾರೆ. ವಿಜ್ಞಾನವನ್ನು ಭೋಧಿಸುವವರು ಮೂಢನಂಬಿಕೆಯನ್ನು ಪೋಷಿಸುತ್ತಿದ್ದಾರೆ. ಗ್ರಹಣ ನೈಸಗೀಕವಾಗಿ ಆಗುವಂತ ಕ್ರಿಯೇಯಾಗಿದೆ, ಆದರೆ ಇದನ್ನು ಹಲವಾರು ಜನತೆ ಮೂಢನಂಬಿಕೆಯಂದು ಬಿಂಬಿಸುತ್ತಿದ್ದಾರೆ. ಜನತೆ ಆಚರಣೆ ಮಾಡುವ ಅವೈಜ್ಞಾನಿಕ ಪದ್ದತಿಯಿಂದ ವೈಜ್ಞಾನಿಕ ಪದ್ದತಿಗೆ ಗ್ರಹಣವಾಗಿದೆ ಎಂದು ಸ್ವಾಮಿ ನುಡಿದರು.

 

ಕಾರ್ಯಕ್ರಮದಲ್ಲಿ ಚನ್ನಬಸವ ಶ್ರೀಗಳು, ಎಸ್.ಜೆ.ಎಸ್ ಸಂಸ್ಥೆ ಕಾರ್ಯದರ್ಶಿ ಡಿ.ಸಿ.ಮೋಹನ್, ನಿರ್ದೆಶಕರುಗಳಾದ ತಿಪ್ಪೇಸ್ವಾಮಿ, ಮಂಜುನಾಥ್, ಭೋವಿ ಸಮಾಜದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಕಾರ್ಯದರ್ಶಿ ಲಕ್ಷ್ಮಣ್, ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ, ಮಾಜಿ ನಿರ್ದೆಶಕರಾದ ವೀರಣ್ಣ ಉಪಸ್ಥಿತರಿದ್ದರು

Share This Article
Leave a Comment

Leave a Reply

Your email address will not be published. Required fields are marked *