ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಯೋಜನೆಗೆ ಬೇಕಾದ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಭೂಮಿ ಬಳಸಿಕೊಳ್ಳಲು ಷರತ್ತು ಬದ್ಧ ಒಪ್ಪಿಗೆ ನೀಡಿದೆ. 128 ಎಕರೆ ಅರಣ್ಯ ಭೂಮಿ ಬಳಸಿಕೊಳ್ಳಲು ಕೇಂದ್ರ ಸರ್ಕಾರದ ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ ಸ್ಥಾಯಿ ಸಮಿತಿ ಒಪ್ಪಿಗೆ ನೀಡಿದೆ.
ಶಿರಾ ತಾಲೂಕಿನ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿ ಧಾಮದ 128 ಎಕರೆ ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣಕ್ಕೆ ಬಳಕೆ ಮಾಡಬೇಕು. ಕಾಲುವೆಯ ಮೇಲೆ ಪ್ರತಿ 500 ಮೀಟರ್ ಅಂತರದಲ್ಲಿ ಮೇಲು ರಸ್ತೆ ನಿರ್ಮಿಸಲು ಷರತ್ತು ವಿಧಿಸಿದೆ. ಇದರಿಂದ ಚಿಂಕಾರ ವನ್ಯಜೀವಿಗಳು ಸುಲಲಿತವಾಗಿ ಓಡಾಡಲು ಅನುಕೂಲ ಆಗಲಿದೆ ಎಂಬ ಷರತ್ತನ್ನು ಕೇಂದ್ರ ಸರ್ಕಾರ ವಿಧಿಸಿದೆ. ಈ ಷರತ್ತಿಗೆ ಕರ್ನಾಟಕ ಕೂಡ ಒಪ್ಪಿಗೆ ಸೂಚಿಸಿದೆ.
ಭದ್ರಾ ಮೇಲ್ದಂಡೆ ಯೋಜನೆಯಿಂದ ಹಲವು ಜಿಲ್ಲೆಗಳಿಗೆ ಅನುಕೂಲ ಆಗಲಿದೆ. ಅದರಲ್ಲೂ ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಭಾರೀ ಅನುಕೂಲವಾಗಲಿದೆ. ಶಿರಾ ತಾಲೂಕಿನಲ್ಲಿ ನೀರಿನ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಅಲ್ಲಿ ಬೇರೆ ಬೆಳೆಯನ್ನು ಜನ ಅಷ್ಟಾಗಿ ಬೆಳೆಯಲು ಸಾಧ್ಯವಾಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಕಂಪ್ಲೀಟ್ ಆದರೆ ಇದರಿಂದ ಶಿರಾ, ಚಿಕ್ಕನಾಯಕನಹಳ್ಳಿ,ಪಾವಗಡ ತಾಲೂಕಿಗೆ ನೀರು ಸರಬರಾಜು ಆಗಲಿದೆ. ನಂತರ ರೈತರ ಬೆಳೆಗಳಿಗೆ ಹನಿ ನೀರಾವರಿ ಮೂಲಕ ನೀರು ಪೂರೈಕೆಯಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆ ಶಾಶ್ಚತ ಬರಪೀಡಿತ ಪ್ರದೇಶಗಳಿಗೆ ವರದಾನವಾಗಲಿದೆ. ಮಧ್ಯ ಕರ್ನಾಟಕ ಭಾಗದ ರೈತರ ಕನಸು ಈ ಮೂಲಕ ನನಸಾಗಲಿದೆ.