ಬೆಂಗಳೂರು : ರಾಜ್ಯದಲ್ಲಿ ಮಳೆ ನಿಲ್ಲುತ್ತಿಲ್ಲ. ಎಲ್ಲೆಡೆ ಬೆಂಬಿಡದೆ ಮಳೆ ಸುರಿಯುತ್ತಿದೆ. ಹಲವು ಕಡೆ ಅನಾಹುತಗಳು ಕಡಿಮೆಯಾಗುತ್ತಿಲ್ಲ. ಆಗಸ್ಟ್ 6ವರೆಗೂ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿಲ್ಲ. ಹೀಗಾಗಿ ಹವಮಾನ ಇಲಾಖೆ ದಕ್ಷಿಣ ಕನ್ನಡ ಭಾಗಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಅಲ್ಲಿನ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಲಾಗಿದೆ. ಬೀಚ್, ನದಿ ತೀರಕ್ಕೆಲ್ಲ ಜನರಿಗೆ ಹೋಗದಂತೆ ಮನವಿ ಮಾಡಿದೆ.
ಇನ್ನು ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗೆ ಎಲ್ಲೋ ಅಲರ್ಟ್ ನೀಡಲಾಗಿದೆ. ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು ಬೆಂಗಳೂರಿನಲ್ಲಿ ಬೆಳಗ್ಗೆಯಿಂದಾನೇ ಮೋಡ ಕವಿದ ವಾತಾವರಣ, ತಣ್ಣನೆ ಗಾಳಿ ಬೀಸುತ್ತಿದೆ. ಹೀಗಾಗಿ ಸಂಜೆ ವೇಳೆಗೆ ಬೆಂಗಳೂರಿನಲ್ಲೂ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಿನ್ನೆ ಸಂಜೆಯೂ ಬೆಂಗಳೂರಿನ ಹಲವು ಭಾಗದಲ್ಲಿ ಜೋರು ಮಳೆಯಾಗಿತ್ತು.
ಇನ್ನು ಚಿತ್ರದುರ್ಗ ಸೇರಿದಂತೆ ತುಮಕೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೀದರ್, ಯಾದಗಿರಿ ಭಾಗದಲ್ಲೂ ಇಂದು ಮಳೆಯಾಗಲಿದೆ. ಈಗಾಗಲೇ ರಾಜ್ಯದ ಹಲವೆಡೆ ಗುಡ್ಡ ಕುಸಿತದಂತ ಪ್ರಕರಣಗಳು ದಾಖಲಾಗುತ್ತಿವೆ. ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗುವವರು ಪರಿಸ್ಥಿತಿಯನ್ನು ಅವಲೋಕಿಸಿ ಪ್ಲ್ಯಾನ್ ಮಾಡಬೇಕಿರುತ್ತದೆ. ಶಿರಾಡಿ ಘಾಟ್ ನಲ್ಲೂ ಗುಡ್ಡ ಕುಸಿತ ಕಂಡಿತ್ತು. ಸದ್ಯ ಎಲ್ಲಾ ಮಣ್ಣನ್ನು ತೆರವುಗೊಳಿಸಿದ್ದು, ಅಲ್ಲಿ ಸಂಚಾರ ಮಾಡುವವರು ಸ್ವಂತ ರಿಸ್ಕ್ ನಲ್ಲಿ ಓಡಾಡಬೇಕಾಗಿದೆ. ಹೀಗಾಗಿ ವಾಹನ ಸವಾರರು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ.