ಬೆಂಗಳೂರು : ದೇವರನಾಡಲ್ಲಿ ಭೂಕುಸಿತ ಸಂಭವಿಸಿ ನೂರಾರು ಸಾವುಗಳು ಸಂಭವಿಸಿವೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಭೂಕಂಪ ತೀವ್ರತೆಗೆ ಸಿಲುಕಿ, ಬದುಕಿ ಬಂದವರದ್ದೇ ಅದೃಷ್ಟ. ನಮ್ಮ ಕರ್ನಾಟಕ ಮೂಲದವರು ಸಾಕಷ್ಟು ಜನ ಸಿಲುಕಿದ್ದಾರೆ. ಅದರಲ್ಲಿ ಬೆಂಗಳೂರಿನ ಕಾರು ಚಾಲಕನನ್ನು ಒಂದೇ ಒಂದು ಮೆಸೇಜ್ ಕಾಪಾಡಿದೆ.
ಮಂಜುನಾಥ್ ಎಂಬಾತ ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದಾರೆ. ನಾಲ್ವರನ್ನು ಕೇರಳದ ವಯನಾಡ್ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದರು. ಟ್ರಿಪ್ ಬಂದಿದ್ದ ದಂಪತಿಗಳು ರೆಸಾರ್ಟ್ ನಲ್ಲಿ ಸ್ಟೇ ಆಗಿದ್ದರು. ಮಂಜುನಾಥ್ ರೆಸಾರ್ಟ್ ಹೊರಗೆ ಕಾರು ನಿಲ್ಲಿಸಿಕೊಂಡು ಮಲಗಿದ್ದರು. ರಾತ್ರಿ 1.15ರ ಸಮಯಕ್ಕೆ ಭೂಕಂಪವಾಗಿದೆ. ರೆಸಾರ್ಟ್ ನಲ್ಲಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ರಭಸ ಮಂಜುನಾಥ್ ಕಾರಿನ ಬಳಿಯೂ ಬಂದಿತ್ತು. ತಕ್ಷಣ ಎಚ್ಚರವಾದ ಮಂಜುನಾಥ್ ಕಾರು ಸ್ಟಾರ್ಟ್ ಮಾಡಿದರು. ಆದರೆ ಮುಂದಕ್ಕೆ ಹೋಗಲಿಲ್ಲ.
ಕಾರಿನಲ್ಲಿ ಜಿಪಿಎಸ್ ಅಳವಡಿಸಿದ್ದರಿಂದ ಕಾರು ಆನ್ ಆಗುತ್ತಿದ್ದಂತೆ ಮಾಲೀಕ ಸಚಿನ್ ಗೆ ಮೆಸೇಜ್ ಹೋಗಿದೆ. ಈ ಸಮಯದಲ್ಲಿ ಕಾರು ಯಾಕೆ ಆನ್ ಆಯ್ತು ಅಂತ ಮಂಜುನಾಥ್ ಗೆ ಕಾಲ್ ಮಾಡಿದಾಗ, ಪ್ರವಾಹದ ಪರಿಸ್ಥಿತಿ ವಿವರಿಸಿದ್ದಾರೆ. ತಕ್ಷಣ ಅಲ್ಲಿಯೇ ಪರಿಚಯದವರಿಗೆ ವಿಷಯ ಮುಟ್ಟಿಸಿ, ಮಾಲೀಕ ಸಚಿನ್, ಮಂಜುನಾಥ್ ಅವರನ್ನು ಕಾಪಾಡಿದ್ದಾರೆ.
ಇನ್ನು ವೈನಾಡಿನ ಚೂರಲ್ ಮಲೆಯಲ್ಲಿ ಚಾಮರಾಜನಗರದ ಕುಟುಂಬವೊಂದು ವಾಸವಿದೆ. ವಿನೋದ್, ಜಯಶ್ರೀ, ಸಿದ್ದರಾಜು ಮತ್ತು ಗೌರಮ್ಮ ವಾಸವಿದ್ದರು. ಹಸು ಕೂಡ ಸಾಕಿದ್ದರು. ರಾತ್ರಿ ಮಲಗಿ ನಿದ್ರಿಸುತ್ತಿದ್ದಾಗ ಹಸು ಚೀರಾಡಿದೆ. ಎದ್ದು ಬಂದು ನೋಡಿದರೆ ಅದಾಗಲೇ ಕೊಟ್ಟಿಗೆಯಲ್ಲಿ ನೀರು ತುಂಬಿತ್ತು. ತಕ್ಷಣ ಮನೆಯಲ್ಲಿದ್ದವರೆಲ್ಲಾ ಗುಡ್ಡದ ಮೇಲಕ್ಕೆ ತೆರಳಿದ್ದಾರೆ. ನೋಡ ನೋಡುತ್ತಿದ್ದಂತೆ ಮನೆಯೆಲ್ಲಾ ನೀರು ತುಂಬಿ, ಮಾಯವಾಗಿತ್ತು. ಈಗ ಎಲ್ಲರೂ ಸುರಕ್ಷಿತವಾಗಿ ಚಾಮರಾಜನಗರಕ್ಕೆ ಬಂದಿದ್ದಾರೆ.