ಹುಬ್ಬಳ್ಳಿ: ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ವಿರೋಧಿಸಿ, ಬಿಜೆಪಿ ಅಭ್ಯರ್ಥಿ ಪರ ಸ್ಪರ್ಧೆಗೆ ನಿಂತಿರುವ ದಿಂಗಾಲೇಶ್ವರ ಸ್ವಾಮೀಜಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಚರಾಸ್ಥಿ-ಸ್ಥಿರಾಸ್ತಿ ಸೇರಿದಂತೆ ಎಲ್ಲಾ ವಿವರವನ್ನು ನೀಡಿದ್ದಾರೆ. ಸ್ವಾಮೀಜಿಗಳು ಸಲ್ಲಿಕೆ ಮಾಡಿರುವ ಆಸ್ತಿಯ ವಿವರದ ಪ್ರಕಾರ ದಿಂಗಾಲೇಶ್ವರ ಸ್ವಾಮೀಜಿಯ ಬಳಿ ಒಟ್ಟು 9.74 ಕೋಟಿ ರೂಪಾಯಿ ಇದೆ.
ದಿಂಗಾಲೇಶ್ವರ ಸ್ವಾಮೀಜಿ ನೀಡಿರುವ ಮಾಹಿತಿ ಪ್ರಕಾರ, 1.22 ಕೋಟಿ ರೂಪಾಯಿ ಚರಾಸ್ಥಿಯಾಗಿದ್ದರೆ, 8.52 ಕೋಟಿ ರೂಪಾಯಿ ಸ್ಥಿರಾಸ್ತಿಯಾಗಿದೆ. 39.68 ಲಕ್ಷ ರೂಪಾಯಿ ಸಾಲ ಇದೆ. ಕೈಯಲ್ಲಿ 1 ಲಕ್ಷದ 25 ಸಾವಿರ ರೂಪಾಯಿ ನಗದು ಇದೆ. ಹಲವು ಬ್ಯಾಂಕ್ ಗಳಲ್ಲಿ ಹನ್ನೊಂದು ಲಕ್ಷ ಹಣ ಇಡಲಾಗಿದೆ. ಜೊತೆಗೆ 4.75 ಲಕ್ಚದ ಶೇರುಗಳನ್ನು ವಿವಿಧ ಸಹಕಾರಿ ಬ್ಯಾಂಕ್ ಗಳಲ್ಲಿ ಬಾಂಡ್ ಇಡಲಾಗಿದೆ. ಸ್ವಾಮೀಜಿ ಮೇಲೆ ಮೂರು ಪ್ರಕರಣಗಳಿವೆ.
ಎರಡು ಟೊಯೊಟೊ ಇನೋವಾ ಕಾರು, ಒಂದು ಟ್ರಾಕ್ಟರ್ ಹಾಗೂ ಒಂದು ಬಸ್ ಅನ್ನು ಹೊಂದಿದ್ದಾರೆ. ಜೊತೆಗೆ 4.35 ಲಕ್ಷ ರೂ. ಮೌಲ್ಯದ 7 ಕೆಜಿ 820 ಗ್ರಾಂ ಬೆಳ್ಳಿ ಹೊಂದಿದ್ದು, 1,17 ಲಕ್ಷ ರೂ. ಮೌಲ್ಯದ 18.9 ಗ್ರಾಂ ಚಿನ್ನವನ್ನು ಹೊಂದಿದ್ದಾರೆ. ಈ ಮೂಲಕ ಒಟ್ಟು 1.22 ಕೋಟಿ ರೂ. ಚರಾಸ್ತಿಯನ್ನು ದಿಂಗಾಲೇಶ್ವರ ಸ್ವಾಮೀಜಿ ಘೋಷಿಸಿಕೊಂಡಿದ್ದಾರೆ. 23 ಎಕರೆ 17 ಗುಂಟೆ ಕೃಷಿ ಭೂಮಿಯನ್ನು ಹೊಂದಿದ್ದು, 19 ಕಡೆ ಕೃಷಿಯೇತರ ಭೂಮಿ ಹೊಂದಿದ್ದಾರೆ. ಜೊತೆಗೆ ಶಾಲಾ ಕಟ್ಟಡ ಕೂಡ ಇದ್ದು, ಒಟ್ಟು, 8.52 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.