ಚಿತ್ರದುರ್ಗ. ಮಾರ್ಚ್.25: ಅನಧಿಕೃತವಾಗಿ ಸಾಗಟ ಮಾಡುತ್ತಿದ್ದ 150 ಕ್ವಿಂಟಲ್ ಅನ್ನಭಾಗ್ಯ ಅಕ್ಕಿಯನ್ನು ಹೊಳಲ್ಕೆರೆ ಮಲಾಡಿಹಳ್ಳಿ ಬಳಿ ಶನಿವಾರ ವಶ ಪಡೆಯಲಾಗಿದೆ.
ಕೆ.ಎ.17 ಎ.ಎ.2952 ಲಾರಿಯಲ್ಲಿ ಶಿವಮೊಗ್ಗ ರಸ್ತೆಯಿಂದ ಅಕ್ರಮವಾಗಿ ಸಾರ್ವಜನಿಕ ಪಡಿತರ ವಿತರಣೆಯಲ್ಲಿ ನೀಡುವ ಅನ್ನಭಾಗ್ಯ ಅಕ್ಕಿ ಸಾಗಣಿಕೆ ಮಾಡಲಾಗುತ್ತದೆ ಎಂಬ ಮಾಹಿತಿ ಆಧರಿಸಿ, ಹೊಳಲ್ಕೆರೆ ಪೊಲೀಸ್ ಉಪನಿರೀಕ್ಷ ಸುರೇಶ್ ಹಾಗೂ ಅವರ ತಂಡ ಲಾರಿ ಮತ್ತು 150 ಕ್ವಿಂಟಲ್ ಅಕ್ಕಿ ವಶಪಡೆದಿದೆ.
ಹೊಳಲ್ಕೆರೆ ತಹಶೀಲ್ದಾರ್ ಫಾತೀಮಾ ಬಿಬಿ ಅವರ ನಿರ್ದೇಶನದ ಅನುಸಾರ ಆಹಾರ ಶಿರಸ್ತೇದಾರ್ ಲಿಂಗರಾಜು ಸ್ಥಳಕ್ಕೆ ಭೇಟಿ ನೀಡಿ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ ಕಲಂ 3 ಮತ್ತು ಚುನಾವಣೆ ಅಕ್ರಮಗಳ ತಡೆಗಟ್ಟುವ ಕಾಯ್ದೆ ಕಲಂ 7 ಅಡಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ಮುಂದುವರೆದಿದೆ. ಕೆ.ಎ.17 ಎ.ಎ.2952 ಲಾರಿ ಚಾಲಕ ಅಕ್ಕಿಯನ್ನು ಚನ್ನಗಿರಿ ತಾಲ್ಲೂಕಿನಿಂದ ಬೆಂಗಳೂರು ಹಾಗೂ ಮಂಡ್ಯ ನಗರಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತನಿಖೆಯಲ್ಲಿ ತಿಳಿಸಿದ್ದಾನೆ.