ಸುದ್ದಿಒನ್, ದಾವಣಗೆರೆ : ಇತ್ತಿಚೆಗೆ ಅಡಿಕೆ ಬೆಳೆ ಬೆಳದ ರೈತ ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ. ಅದಕ್ಕೆ ಕಾರಣ ದಿನೇ ದಿನೇ ಅಡಿಕೆ ಬೆಲೆ ಇಳಿಕೆಯಾಗುತ್ತಿರುವುದು. ಪ್ರತಿ ಕ್ವಿಂಟಾಲ್ ಗೆ 2,300 ರೂಪಾಯಿ ಇಳಿಕೆಯಾಗಿರುವುದು ಅಡಿಕೆ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ. ಈ ಬಾರಿ ಮೊದಲೇ ಮಳೆಯಿಲ್ಲದೆ ಬರಗಾಲದಿಂದ ಭೂಮಿ ಬಿಸಿಯಾಗಿದೆ. ಬೋರ್ ವೆಲ್ ನಲ್ಲಿ ನೀರು ಬರುವುದೇ ಕಷ್ಟ ಸಾಧ್ಯವಾಗಿದೆ. ಹೀಗಿರುವಾಗಲೂ ದಾವಣಗೆರೆಯಲ್ಲಿ ರೈತರು ಅಡಿಕೆ ಬೆಳೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದಾರೆ. ಇದರ ನಡುವೆ ಅಡಿಕೆ ಧಾರಣೆ ಕುಸಿತವಾದರೆ ರೈತರ ಸ್ಥಿತಿ ಏನಾಗಬಹುದು..?
ಅಡಿಕೆ ಧಾರಣೆ ಕುಸಿತವಾಗಲು ಪ್ರಮುಖವಾದ ಒಂದು ಕಾರಣವೂ ಇದೆ. ಅಕ್ರಮವಾಗಿ ಅಡಿಕೆಯನ್ನು ರಪ್ತು ಮಾಡಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ದಾವಣಗೆರೆಯಲ್ಲೂ ಪ್ರಮುಖ ವಾಣಿಜ್ಯ ಬೆಳೆ ಎಂದರೆ ಅದು ಅಡಿಕೆ ಬೆಳೆಯೇ ಆಗಿದೆ. ಚನ್ನಗಿರಿ ಭಾಗದಲ್ಲೂ ಯಥೇಚ್ಛವಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ 57,000 ರೂಪಾಯಿ ಪ್ರತಿ ಕ್ವಿಂಟಾಲ್ ಗೆ ಅಡಿಕೆ ವಹಿವಾಟು ನಡೆದಿತ್ತು. ಆದರೆ ಈ ವರ್ಷ 47,000 ಆಸುಪಾಸಿನಲ್ಲಿದೆ. ಅಂದ್ರೆ ಹತ್ತು ಸಾವಿರ ಕಡಿಮೆಯಾಗಿದೆ. ಒಂದು ಕ್ವಿಂಟಾಲ್ ಗೆ ಹತ್ತು ಸಾವಿರ ಕಡಿಮೆಯಾದರೆ ರೈತನಿಗೆ ತಲೆನೋವಾಗದೆ ಇರುತ್ತದೆಯೇ.
ಉತ್ತರ ಭಾರತದ ಹಲವೆಡೆಯಲ್ಲಿ ಬಯಲುಸೀಮೆ, ಮಲೆನಾಡು ಹಾಗೂ ಮಧ್ಯಕರ್ನಾಟಕ, ಕರಾವಳಿ ಭಾಗದ ಅಡಿಕೆಗೆ ಭಾರೀ ಡಿಮ್ಯಾಂಡ್ ಇದೆ. ಈ ಬೇಡಿಕೆಗೆ ಅನುಗುಣವಾಗಿ ಕರಾವಳಿ ಜನ ಅಡಿಕೆ ಬೆಳೆಯುತ್ತಾರೆ. ಆದರೆ ಕರಾವಳಿ ಮಾರುಕಟ್ಟೆಗೆ ವಿದೇಶದಿಂದ ಅಡಿಕೆ ಆಗಮಿಸುತ್ತಿರುವುದರಿಂದ ಅಡಿಕೆ ಬೆಲೆಯಲ್ಲಿ ಕುಸಿತವಾಗುತ್ತಿದೆ ಎಂದು ಚರ್ಚೆಗಳು ನಡೆಯುತ್ತಿವೆ.