ಸುದ್ದಿಒನ್, ಬೆಂಗಳೂರು, ಜನವರಿ.18 : ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಜನವರಿ 17) ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 10 ರನ್ ಗಳ ಜಯ ಸಾಧಿಸಿದೆ.
https://x.com/JioCinema/status/1747684671524057449?s=20
ಹೀಗಾಗಿ ರೋಹಿತ್ ಪಡೆ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಈ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಅಫ್ಘಾನಿಸ್ತಾನಕ್ಕೆ 213 ರನ್ ಗಳ ಗುರಿ ನೀಡಿತು. ಬಳಿಕ ಅಫ್ಘಾನಿಸ್ತಾನ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಪಂದ್ಯ ಟೈ ಆಯಿತು. ಆ ಬಳಿಕ ಮೊದಲ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 6 ಎಸೆತಗಳಲ್ಲಿ 16 ರನ್ ಗಳಿಸಿತು. ಗುರಿ ಬೆನ್ನತ್ತಿದ ಭಾರತ ಕೂಡ 6 ಎಸೆತಗಳಲ್ಲಿ 16 ರನ್ ಗಳಿಸಿತು. ಎರಡನೇ ಬಾರಿಗೆ ಪಂದ್ಯ ಟೈ ಆಯಿತು. ಇದರೊಂದಿಗೆ ಪಂದ್ಯ ಮತ್ತೊಮ್ಮೆ ಸೂಪರ್ ಓವರ್ ಆಡಬೇಕಾಯಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಮೊದಲ ಐದು ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿತ್ತು. ಈ ಮೂಲಕ ಅಫ್ಘಾನಿಸ್ತಾನಕ್ಕೆ 12 ರನ್ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಮೊದಲ ಮೂರು ಎಸೆತಗಳಲ್ಲಿ 1 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಭಾರತ 10 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತು.
ರೋಹಿತ್-ರಿಂಕು 190 ರನ್‌ಗಳ ಜೊತೆಯಾಟ :
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗಧಿತ 20 ಓವರ್‌ಗಳಲ್ಲಿ 213 ರನ್ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ 121 ರನ್‌ಗಳ ಅಜೇಯ ಇನ್ನಿಂಗ್ಸ್‌ನೊಂದಿಗೆ ಐದನೇ ಟಿ20 ಶತಕವನ್ನು ಸಿಡಿಸಿದರು. ರಿಂಕು ಸಿಂಗ್ ಕೂಡ 39 ಎಸೆತಗಳಲ್ಲಿ 69 ರನ್ ಗಳಿಸಿ ಅಜೇಯರಾಗಿ ಉಳಿದರು. ರೋಹಿತ್ ಮತ್ತು ರಿಂಕು 190 ರನ್‌ಗಳ ದಾಖಲೆಯ ಜೊತೆಯಾಟ ನಡೆಸಿದರು. ಹೀಗಾಗಿ ಟೀಂ ಇಂಡಿಯಾ ಕೇವಲ 4 ವಿಕೆಟ್ ಕಳೆದುಕೊಂಡು ಅಫ್ಘಾನಿಸ್ತಾನಕ್ಕೆ 213 ರನ್ ಗಳ ಬೃಹತ್ ಗುರಿ ನೀಡಿತ್ತು.
ಈ ಗುರಿಯನ್ನು ಸಾಧಿಸುವ ಸಲುವಾಗಿ ಅಫ್ಘಾನಿಸ್ತಾನ ತಂಡದಲ್ಲಿ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಮತ್ತು ಗುಲ್ಬದಿನ್ ನೈಬ್ ಕ್ರಮವಾಗಿ 50, 50 ಮತ್ತು 55 ರನ್ ಗಳಿಸಿದರು. ಆಲ್ ರೌಂಡರ್ ಮೊಹಮ್ಮದ್ ನಬಿ 34 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಪಂದ್ಯ ಟೈ ಆಯಿತು. ನಂತರ ಎರಡು ಸೂಪರ್ ಓವರ್‌ಗಳ ರೋಚಕ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಲಭಿಸಿತು.