ಸಿನಿಮಾದಲ್ಲಿ ಬ್ಯುಸಿಯಾಗಿರುವ ಯಶ್ ಈ ಬಾರಿ ಸಾರ್ವಜನಿಕವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿಲ್ಲ. ಆದರೆ ಅಭಿಮಾನಿಗಳು ಬಿಡಬೇಕಲ್ಲ..? ಯಶ್ ಬಾರದೆ ಇದ್ದರು ನಾವೂ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತೀವಿ ಎಂದು ಆಚರಣೆ ಮಾಡುವುದಕ್ಕೆ ಹೊರಟಿದ್ದರು. ಆದರೆ ವಿಧಿ ಅವರನ್ನು ತನ್ನತ್ತ ಕರೆದುಕೊಂಡು ಬಿಟ್ಟಿತು. ಯಶ್ ಅಂದು ಎಲ್ಲೋ ಶೂಟಿಂಗ್ ನಲ್ಲಿ ಇದ್ದರು ಕೂಡ ಓಡೋಡಿ ಬಂದು ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಇದೀಗ ಮೃತರ ಕುಟುಂಬಕ್ಕೆ ಯಶ್ ಕಡೆಯಿಂದ ಪರಿಹಾರ ಸಿಕ್ಕಿದೆ. ರಾಕಿಭಾಯ್ ಸ್ನೇಹಿತರಾದ ರಾಕೇಶ್, ಚೇತನ್ ಹಾಗೂ ಗದಗ ಜಿಲ್ಲೆಯ ಯಶ್ ಅಭಿಮಾನಿಗಳು ಮೃತರ ಮನೆಗೆ ಹೋಗಿ ಪರಿಹಾರ ನೀಡಿ ಬಂದಿದ್ದಾರೆ. ಹನಮಂತ ಹರಿಜನ, ಮುರಳಿ ನಡವಿನಮನಿ, ನವೀನ್ ಗಾಜಿ ಅವರು ಮೃತಪಟ್ಟಿದ್ದರು.
ಇದೀಗ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷದಂತೆ ಪರಿಹಾರದ ಹಣ ನೀಡಿದ್ದಾರೆ. ಕಟೌಟ್ ಕಟ್ಟಲು ಹೋಗಿ ಗಾಯಗೊಂಡಿದ್ದವರಿಗೂ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಜನವರಿ 8ರಂದು ಈ ದುರ್ಘಟನೆ ನಡೆದಿತ್ತು. ಯಶ್ ಅವರ ಹುಟ್ಟುಹಬ್ಬಕ್ಕೆ ಕಟೌಟ್ ಕಟ್ಟಲು ಹೋಗಿದ್ದ ಮೂವರು, ಬಿದ್ದು ದುರ್ಮರಣ ಹೊಂದಿದ್ದರು. ಮೃತರೆಲ್ಲ ಇನ್ನು 20 ವರ್ಷದ ಆಸುಪಾಸಿನವರೂ. ಮಕ್ಕಳನ್ನು ಕಳೆದುಕೊಂಡ ಮನೆಯವರ ದುಃಖ ಮುಗಿಲು ಮುಟ್ಟಿತ್ತು. ಶೂಟಿಂಗ್ ನಿಂದ ಓಡೋಡಿ ಬಂದ ನಟ ಯಶ್, ಮೃತರ ಕುಟುಂಬಸ್ಥರ ಜೊತೆ ಮಾತನಾಡಿದರು. ಬಳಿಕ ಬೇಸರ ವ್ಯಕ್ತಪಡಿಸಿದರು. ಅಭಿಮಾನಿಗಳಲ್ಲಿ ಈ ರೀತಿಯೆಲ್ಲಾ ಮಾಡಬೇಡಿ. ನಂಗೆ ನನ್ನ ಹುಟ್ಟುಹಬ್ಬ ಎಂದರೇನೆ ಭಯ ಆಗುತ್ತೆ, ಅಸಹ್ಯ ಆಗುತ್ತೆ ಎಂದು ಬೇಸರ ಹೊರ ಹಾಕಿದ್ದರು.