ಚಿತ್ರದುರ್ಗ. ಅ.28: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಭಾವಚಿತ್ರ ಹಾಗೂ ಪುತ್ಥಳಿ ಮೆರವಣಿಗೆಗೆ ಶನಿವಾರ ಕೋಟೆ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಹಾಗೂ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ವಾಲ್ಮೀಕಿ ಪುತ್ಥಳಿಗೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಚಿತ್ರದುರ್ಗ | ಅದ್ದೂರಿ ವಾಲ್ಮೀಕಿ ಜಯಂತಿ ಆಚರಣೆ, ಭಾವಚಿತ್ರ ಹಾಗೂ ಪುತ್ಥಳಿ ಮೆರವಣಿಗೆ pic.twitter.com/pEpvfTiC9o
— suddione-kannada News (@suddione) October 28, 2023
ಕೋಟೆ ಮುಂಭಾಗದಿಂದ ಆರಂಭವಾದ ಮೆರವಣಿಗೆ, ಏಕನಾಥೇಶ್ವರ ಹಾಗೂ ಹುಚ್ಚೆಂಗಿಯಲ್ಲಮ್ಮ ದೇವಸ್ಥಾನ ಮುಂಭಾಗದಿಂದ, ಆನೆ ಬಾಗಿಲು, ಗಾಂಧಿ ವೃತ್ತ, ಎಸ್.ಬಿ.ಐ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಮದಕರಿ ನಾಯಕ ವೃತ್ತದವರೆಗೆ ಸಾಗಿತು. ಖಾಸ ಬೇಡರ ಪಡೆ, ಕಹಳೆ ವಾದನ, ಡೋಲು, ತಪ್ಪಡೆ, ಕರಡಿ ಮಜಲು, ಕೀಲು ಕುದುರೆ, ಗೊಂಬೆ ಕುಣಿತ, ಪಟ ಕುಣಿತ ಮೆರವಣಿಗೆಗೆ ಸಾಂಸ್ಕೃತಿಕ ರಂಗನ್ನು ತುಂಬಿದವು.
ಈ ಸಂದರ್ಭದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಬಿ. ಕಾಂತರಾಜ್, ಮದಕರಿ ನಾಯಕ ವಿದ್ಯಾಸಂಸ್ಥೆಯ ಸಂದೀಪ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಓ.ಪರಮೇಶ್ವರಪ್ಪ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗದದ ಜಿಲ್ಲಾ ವ್ಯವಸ್ಥಾಪಕಿ ಟಿ.ಎಸ್.ಮಂಜುಳ, ನಗರ ಸಭೆ ಆಯುಕ್ತೆ ರೇಣುಕಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ನರ್ಸಿಂಗ್,ಬಿಎಡ್,ಪದವಿ,ಪಿಯು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.