ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 17 : ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2025-26 ನೇ ಸಾಲಿನಲ್ಲಿ ಮೂವತ್ತು ಲಕ್ಷ ರೂ.ಗಳ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಮಹಮದ್ ನಿಜಾಮುದ್ದಿನ್ ತಿಳಿಸಿದರು.
ಅಗಸನಕಲ್ಲು ಟಿ.ಎಂ.ಕೆ.ಕಾಂಪೌಂಡ್‍ನಲ್ಲಿರುವ ಅಹಮದ್ ಪ್ಯಾಲೇಸ್‍ನಲ್ಲಿ ಗುರುವಾರ ನಡೆದ ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 62 ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
25 ಕೋಟಿ 66 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದ್ದು, 30 ಲಕ್ಷ ರೂ.ಲಾಭದಲ್ಲಿದೆ. 1395 ಸದಸ್ಯರುಗಳಿದ್ದು, ಎಲ್ಲರ ಸಹಕಾರದಿಂದ ಸೊಸೈಟಿ ಈ ಹಂತಕ್ಕೆ ತಲುಪಲು ಕಾರಣ. ಬೋನಸ್, ಸ್ಯಾಲರಿ, ಡಿವಿಡೆಂಟ್ ನೀಡುವಷ್ಟರ ಮಟ್ಟಿಗೆ ಸೊಸೈಟಿ ಬೆಳೆದು ನಿಂತಿದೆಯೆಂದರೆ ಪ್ರತಿಯೊಬ್ಬರ ಬೆಂಬಲದಿಂದ ಎನ್ನುವುದನ್ನು ಮರೆಯುವಂತಿಲ್ಲ. ಒಂದು ಕೋಟಿ ರೂ.ರಿಸರ್ವ್ ಫಂಡ್ ಇರಿಸಲಾಗಿದೆ. ಸೈಟ್ ಖರೀಧಿಸಿದ್ದು, ಮುಂದಿನ ತಿಂಗಳು ಕಟ್ಟಡ ಆರಂಭಿಸಲಾಗುವುದು ಎಂದು ಹೇಳಿದರು.
7 ಕೋಟಿ 90 ಲಕ್ಷ ರೂ. ಸ್ವಂತ ಬಂಡವಾಳವಿದ್ದು, ಆರು ಕೋಟಿ 21 ಲಕ್ಷ ರೂ.ಸಾಲ ನೀಡಿದ್ದೇವೆ. ನಮ್ಮ ಸೊಸೈಟಿಯಲ್ಲಿ ಹಣ ಹೂಡಿರುವ ಠೇವಣಿದಾರರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ. ಎಲ್ಲಿಯೂ ಹಣಕಾಸು ಪೋಲಾಗಲು ಬಿಡುವುದಿಲ್ಲ. ಸೊಸೈಟಿಯಲ್ಲಿ ಕಂಪ್ಯೂಟರ್, ಎಸಿ, ವಾಹನ ಸೌಲಭ್ಯವಿದೆ. ಮೃತಪಟ್ಟ ಸದಸ್ಯರುಗಳಿಗೆ ಇನ್ನು ಮುಂದೆ ಹತ್ತು ಸಾವಿರ ರೂ.ಗಳನ್ನು ಅಂತ್ಯಸಂಸ್ಕಾರಕ್ಕೆ ನೀಡುವುದಾಗಿ ಘೋಷಿಸಿದರು.
ಸದಸ್ಯರುಗಳಿಗೆ ಮೂರು ಲಕ್ಷ ರೂ.ಸೆಕ್ಯುರಿಟಿ ಲೋನ್ ಕೊಡುತ್ತೇವೆ. 2025-26 ನೇ ಸಾಲಿನಲ್ಲಿ 21 ಸದಸ್ಯರು ಮೃತಪಟ್ಟಿದ್ದು, ಒಂದು ಲಕ್ಷ ಹದಿನೇಳು ಸಾವಿರ ರೂ.ಗಳನ್ನು ಮೃತ ಕುಟುಂಬದವರಿಗೆ ನೀಡಲಾಗಿದೆ. ಸಾಲ ಪಡೆದವರು ಸಕಾಲಕ್ಕೆ ಕಂತು ಮತ್ತು ಬಡ್ಡಿಯನ್ನು ಪಾವತಿಸಿ ಸೊಸೈಟಿಯ ಉನ್ನತಿಗೆ ಕೈಜೋಡಿಸಬೇಕು. ಜಾಮೀನುದಾರರ ಮೇಲೂ ಹೆಚ್ಚಿನ ಜವಾಬ್ದಾರಿಯಿದೆ ಎಂದರು.
ಡಿ.ಸಿ.ಸಿ.ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಇಲಿಯಾಸ್‍ಉಲ್ಲಾ ಷರೀಫ್ ಮಾತನಾಡಿ ರಾಜ್ಯದಲ್ಲಿ 141 ಕೋ-ಆಪರೇಟಿವ್ ಸೊಸೈಟಿ ಹಾಗೂ ಸಹಕಾರ ಸಂಘಗಳಿವೆ. ಯಾವ ಸೊಸೈಟಿಯೂ ನಷ್ಟ ಅನುಭವಿಸಬಾರದೆಂದರೆ ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಸಾಲ ಮತ್ತು ಬಡ್ಡಿಯನ್ನು ಪಾವತಿಸಬೇಕು. ಮೂವತ್ತು ಲಕ್ಷ ರೂ.ಲಾಭ ಗಳಿಸಿರುವ ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಾಲ ವಸೂಲಾತಿಯಲ್ಲಿಯೂ ಮುಂಚೂಣಿಯಲ್ಲಿದೆ. ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಶಿಕ್ಷಣದ ಜೊತೆ ಗುರು-ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಸಾಧಿಕ್‍ಬಾಷಾ, ಗೌರವ ಕಾರ್ಯದರ್ಶಿ ಸೈಯದ್ ದಾದಾಪೀರ್, ನಿರ್ದೇಶಕರುಗಳಾದ ಜಮೀಲ್ ಅಹಮದ್
ಮಹಮದ್ ಶಫಿ, ಮಹಮದ್ ಮೈನುದ್ದಿನ್, ಯಾಸಿನ್ ಶರೀಫ್, ಮಹಮದ್ ಶಫೀಖ್, ನೂರುಲ್ಲಾ, ನಯಾಜ್ ಅಹಮದ್, ಅಮ್ಜದ್‍ಪಾಷಾ, ಸೈಯದ್ ಸಾಬೀರ್
ಸೈಯದ್ ಜಲೀಲ್ ಅಹಮದ್, ಉಮ್ಮೆ ತಸ್ಮಿಯಾಭಾನು, ರಫಿಖಾಭಾನು ಇವರುಗಳು ವೇದಿಕೆಯಲ್ಲಿದ್ದರು.
ಸೊಸೈಟಿ ವ್ಯವಸ್ಥಾಪಕ ಎಂ.ಎ.ಐ. ಪಾಷ ವರದಿ ಮಂಡಿಸಿದರು. ಸೊಸೈಟಿಯ ಸಿಬ್ಬಂದಿ ವರ್ಗ ಹಾಗೂ ಪಗ್ಮಿ ಕಲೆಕ್ಟರ್‍ಗಳು ಮಹಾಸಭೆಯಲ್ಲಿ ಹಾಜರಿದ್ದರು.
ಜಾನಪದ ಹಾಡುಗಾರ ಹರೀಶ್ ನಿರೂಪಿಸಿದರು.
ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕರಿಸಲಾಯಿತು.












