ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.15 : ನಾಡಿನ ಹಿರಿಯ ವಿದ್ವಾಂಸರು, ಖ್ಯಾತ ಇತಿಹಾಸ ಸಂಶೋಧಕರು, ಶಾಸನ, ಮೋಡಿ ಲಿಪಿ ತಜ್ಞರು ಹಾಗೂ ಸಾಹಿತಿಗಳು ಆದ ಡಾ. ಬಿ. ರಾಜಶೇಖರಪ್ಪ ಇವರನ್ನು ಕರ್ನಾಟಕ ಇತಿಹಾಸ ಅಕಾಡೆಮಿಯು ಕೊಡಮಾಡುವ ಅತ್ಯುನ್ನತ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ಈ ಸಾಲಿಗೆ ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಯನ್ನು ಬಿ.ಆರ್. ಆರ್. ಫ್ಯಾಮಿಲಿ ಚಾರಿಟಬಲ್ ಟ್ರಸ್ಟ್ ಪ್ರಾಯೋಜಿಸುತ್ತಿದ್ದು ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಹಾಗೂ ಪಾರಿತೋಷಕಗಳನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ಪಾವಗಡದಲ್ಲಿ ನವಂಬರ್ ತಿಂಗಳ ಏಳು, ಎಂಟು ಮತ್ತು ಒಂಬತ್ತನೇ ತಾರೀಖಿನಂದು ನಡೆಯಲಿರುವ ಕರ್ನಾಟಕ ಇತಿಹಾಸ ಅಕಾಡೆಮಿಯ 37ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗುವುದು.
ಪ್ರಶಸ್ತಿಗೆ ಭಾಜನರಾಗಿರುವ ಡಾ. ಬಿ. ರಾಜಶೇಖರಪ್ಪನವರನ್ನು ಇತಿಹಾಸ ಅಕಾಡೆಮಿಯ ಸದಸ್ಯರಾದ ಸಿ.ಎಂ. ತಿಪ್ಪೇಸ್ವಾಮಿ, ಹೆಚ್. ವಿ. ಇಂದುಶೇಖರ್ ಚಿನಿವಾರ್ ಅಭಿನಂದಿಸಿದರು. ಈ ಸಮಯದಲ್ಲಿ ಸನ್ಮಾನಿತರ ಪತ್ನಿಯವರಾದ ಡಾಕ್ಟರ್ ಯಶೋಧ ರಾಜಶೇಖರಪ್ಪನವರು ಹಾಜರಿದ್ದರು.
ಇತಿಹಾಸ ಅಕಾಡೆಮಿಯು ಈ ಹಿಂದೆಯೂ ಡಾಕ್ಟರ್ ಬಿ. ರಾಜಶೇಖರಪ್ಪ ನವರಿಗೆ ಪ್ರತಿಷ್ಠಿತ “ಬಾ.ರ. ಗೋಪಾಲ್ ಶಾಸನ ತಜ್ಞ” ಮತ್ತು “ಸಂಶೋಧನಾ ಶ್ರೀ” ಪ್ರಶಸ್ತಿ ನೀಡಿತ್ತು. ಪ್ರಶಸ್ತಿ ಪುರಸ್ಕೃತರು 2018ರಲ್ಲಿ ಬಾದಾಮಿ ಬಳಿಯ ಶಿವಯೋಗ ಮಂದಿರದಲ್ಲಿ ನಡೆದ ಇತಿಹಾಸ ಅಕಾಡೆಮಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.