ಬೆಂಗಳೂರು: ಬಿಹಾರದಲ್ಲಿ ಸಿಎಂ ನಿತಿನ್ ಕುಮಾರ್ ಜಾತಿ ಗಣತಿಯನ್ನು ನಡೆಸಿ ವರದಿಯನ್ನು ಬಹಿರಂಗಪಡಿಸಿದ್ದಾರೆ. ಜಾತಿಗಣತಿ ಬರದಿ ಬಿಡುಗಡೆ ಮಾಡಿದ್ದಕ್ಕೆ ಬಿಹಾರದ ಸರ್ಕಾರವನ್ನು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಶ್ಲಾಘಿಸಿದ್ದಾರೆ. ಹೀಗಾಗಿ ಕರ್ನಾಟಕದಲ್ಲೂ ಜಾತಿ ಗಣತಿ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, “ಇಂಡಿಯಾ”ಮೈತ್ರಿ ಕೂಟದ ಆಡಳಿತವಿರುವ ಬಿಹಾರ ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಿದ ಸರ್ಕಾರದ ಐತಿಹಾಸಿಕ ನಡೆ ಅಭಿನಂದನೀಯ. ಹಿಂದುಳಿದ,ಶೋಷಿತವೂ ಸೇರಿದಂತೆ ಎಲ್ಲಾ ವರ್ಗಗಳ ಉನ್ನತಿ ಹಾಗೂ ಅಭಿವೃದ್ಧಿಗೆ ಜಾತಿಗಣತಿ ವರದಿ ಸಹಾಯ ಮಾಡುತ್ತದೆ ಎಂಬ ವೈಜ್ಞಾನಿಕ ಧೋರಣೆ ಕಾಂಗ್ರೆಸ್ ಪಕ್ಷದ್ದಾಗಿದೆ.
ಜಾತಿ ಗಣತಿ ಬಹಿರಂಗ ಪಡಿಸುವ ಕುರಿತು ಹಾಗೂ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ನಾಯಕರಾದ ಶ್ರೀ @RahulGandhi ಅವರು ಧ್ವನಿ ಎತ್ತಿದ್ದಾರೆ. ಬಿಹಾರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಕೂಡ ರಾಜ್ಯದಲ್ಲಿ ಈಗಾಗಲೇ ಸಿದ್ದವಾಗಿರುವ ಹಿಂದುಳಿದ ವರ್ಗಗಳ ಜಾತಿ ವರದಿಯನ್ನ ಬಹಿರಂಗ ಪಡಿಸುವ ದಿಟ್ಟತನ ತೋರಬೇಕಿದೆ ಎಂದಿದ್ದಾರೆ.
ಬಿಹಾರದಲ್ಲಿ ಸಿಎಂ ನಿತಿನ್ ಹಲವು ತಿಂಗಳುಗಳ ಹಿಂದೆಯೇ ರಾಜ್ಯದಲ್ಲಿ ಜಾತಿ ಗಣತಿ ವಿಚಾರವಾಗಿ ಸಮೀಕ್ಷೆ ಕೈಗೊಂಡಿದ್ದರು. ಇದಕ್ಕೆ ಬಿಜೆಪಿ ವಿರೋಧ ಕೂಡ ವ್ಯಕ್ತಪಡಿಸಿತ್ತು. ಆದರೆ ಇದೀಗ ಜಾತಿ ಸಮೀಕ್ಷೆ ಹೊರ ಬಂದ ಬಳಿಕ ಸಿಎಂ ನಿತೀಶ್ ಕುಮಾರ್, ಎಲ್ಲಾ ರಾಜ್ಯದ ರಾಜಕೀಯ ಪಕ್ಷಗಳನ್ನು ಸಭೆಗೆ ಕರೆದಿದ್ದಾರೆ. ಜಾತಿಗಣತಿಯ ಆಧಾರದ ಮೇಲೆ ಸೌಲಭ್ಯ ಹಂಚಿಕೆ ಮಾಡುವುದಕ್ಕೂ ಇದು ನೆರವಾಗುತ್ತದೆ ಎಂಬ ಕಾರಣಕ್ಕೇನೆ ಜಾತಿಗಣತಿ ಮಾಡಿ ಎಂದು ಬೇಡಿಕೆ ಹೆಚ್ಚಾಗುತ್ತಿದೆ.