ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.27 : ಕಾವೇರಿ ನದಿ ನೀರನ್ನು ರಾಜ್ಯದಿಂದ ತಮಿಳುನಾಡಿಗೆ ಹರಿಸುತ್ತಿರುವುದರಿಂದ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಳ್ಮೆಯನ್ನು ಕೆಣಕುವುದು ಸರಿಯಲ್ಲ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಎರಡು ರಾಜ್ಯಗಳ ನಡುವೆ ಎದ್ದಿರುವ ಜಲ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕೆಂದು ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಸಲಹೆ ನೀಡಿದರು.
ವಿವಿಧ ಸಂಘಟನೆಗಳು, ಹೋರಾಟಗಾರರು ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮದ್ರಾಸ್ ಪ್ರಾಂತ್ಯಕ್ಕೆ ಕರ್ನಾಟಕ ಒಳಗಾಗಿದ್ದ ಸಂದರ್ಭ 1932 ರಲ್ಲಿ ಇಷ್ಟಾನುಸಾರ ಒಪ್ಪಂದ ಮಾಡಿಕೊಂಡು ಅಂದಿನಿಂದ ಪ್ರತಿ ವರ್ಷವೂ ತಮಿಳುನಾಡಿಗೆ ಕಾವೇರಿ ನೀರು ಹರಿಯುತ್ತಿದೆ. ಜಲವಿವಾದ ಬಗೆಹರಿಸುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲವಾದ್ದರಿಂದ ಎರಡು ರಾಜ್ಯಗಳ ನಡುವೆ ಶಾಂತಿ ಭಂಗವಾಗುತ್ತಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ಆದೇಶದಿಂದ ರಾಜ್ಯದ ಜನತೆಯಲ್ಲಿ ರೋಷ ಉಕ್ಕಿ ಹರಿಯುತ್ತಿದೆ. ಪ್ರತಿದಿನ ಐದು ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಸೆ.29 ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿರುವುದಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದರು.
ತಮಿಳುನಾಡಿಗೆ ವರ್ಷಕ್ಕೆ ಮೂರು ಬೆಳೆ ಕರ್ನಾಟಕಕ್ಕೆ ಒಂದು ಬೆಳೆ. ಇದು ಯಾವ ರೀತಿಯ ಒಪ್ಪಂದ. ನ್ಯಾಯಾಲಯದ ಆದೇಶ ಪಾಲಿಸುತ್ತೇವೆನ್ನುವುದಕ್ಕಿಂತ ಮುಖ್ಯವಾಗಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿ ಜಲಾಶಯಗಳಲ್ಲಿರುವ ನೀರಿನ ಮಟ್ಟವನ್ನು ಮನವರಿಕೆ ಮಾಡಿಕೊಡಬೇಕಿತ್ತು. ರಾಜ್ಯದ ಪಾಲಿಗೆ ಇದೊಂದು ಕರಾಳ ಶಾಸನ. ಚುನಾವಣೆ ಆಯೋಗವಿದ್ದಂತೆ ಜಲವಿವಾದಕ್ಕೆ ಸಂಬಂಧಪಟ್ಟಂತೆ ಜಲ ಆಯೋಗ ರಚಿಸಬೇಕು.
ರಾಜ್ಯದಲ್ಲಿ ಭೀಕರ ಬರಗಾಲವಿದ್ದರು ತಮಿಳುನಾಡಿಗೆ ನೀರು ಹರಿಯುತ್ತಿದೆ. ನೈಸರ್ಗಿಕ ನ್ಯಾಯ ತಪ್ಪಿದೆ. ಎಸ್.ಬಂಗಾರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸುಗ್ರಿವಾಜ್ಞೆ ತಂದು ತಮಿಳುನಾಡಿಗೆ ನೀರು ಬಿಡಲು ಆಗುವುದಿಲ್ಲ ಎನ್ನುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಕಾವೇರಿ ನೀರು ಪ್ರಾಧಿಕಾರ ತಮಿಳುನಾಡು ಪರವಾಗಿ ತೀರ್ಮಾನ ಕೊಡುತ್ತಿದೆ ಎಂದು ಆಪಾದಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಎ.ಪಿ.ಎಂ.ಸಿ. ಹಮಾಲರ ಸಂಘದ ಅಧ್ಯಕ್ಷ ಕಾಂ.ಬಿ.ಬಸವರಾಜಪ್ಪ, ರೈತ ಮುಖಂಡ ಧನಂಜಯ ಹಂಪಯ್ಯನಮಾಳಿಗೆ, ರುದ್ರಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‍ಕುಮಾರ್‍ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಮಹಾಂತೇಶ್, ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಕಾಂ.ಈ.ಸತ್ಯಕೀರ್ತಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಸಿ.ಕೆ.ಗೌಸ್‍ಪೀರ್, ರಾಜಪ್ಪ, ಕರಿಬಸಣ್ಣ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.