ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಸದಾ ಒಂದಲ್ಲ ಒಂದು ರೀತಿ ಹೊಸ ಪ್ರಯೋಗಗಳ ಮೂಲಕ ರಾಜ್ಯದ ಜನರ ಮನೆ ಮಾತಾಗಿರುವ ಕೆಲವೇ ಪತ್ರಕರ್ತರಲ್ಲಿ ಎಚ್.ಆರ್.ರಂಗನಾಥ್ ಪ್ರಮುಖರು. ಕನ್ನಡಪ್ರಭ, ಸುವರ್ಣ ಟಿವಿ ಸೇರಿ ವಿವಿಧ ಮುದ್ರಣ ಹಾಗೂ ದೃಶ್ಯ ಮಾಧ್ಯಮದಲ್ಲಿ ಕೆಲಸ ನಿರ್ವಹಿಸಿರುವ ರಂಗನಾಥ್ ಸದ್ಯ ತಮ್ಮದೇ ಮಾಲೀಕತ್ವದಲ್ಲಿ ಪಬ್ಲಿಕ್ ಟಿವಿ ದೃಶ್ಯ ಮಾಧ್ಯಮ ನಡೆಸುತ್ತಿದ್ದು, ಇದರ ಕೇಂದ್ರಬಿಂದು ಕೂಡ ರಂಗನಾಥ್ ಆಗಿದ್ದಾರೆ.
ಪ್ರತಿದಿನ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುವ ಇವರು ರಾಜಕಾರಣಿಗಳು, ಅಧಿಕಾರಿಗಳ ತಪ್ಪು ನಡೆಯನ್ನು ಹಳ್ಳಿ ಸೊಗಡು ಶೈಲಿಯಲ್ಲಿ ಖಂಡಿಸಿ ಜನರ ಮನ ಗೆದ್ದಿದ್ದಾರೆ.
ಇಂತಹ ರಂಗನಾಥ್ ಒಂದೆರಡು ದಿನಗಳಿಂದ ಪ್ರಮುಖ ರಾಜಕಾರಣಿಗಳು, ಮಠಾಧೀಶರು, ಅಧಿಕಾರಿಗಳ ಮನೆಗೆ ಭೇಟಿ ನೀಡುತ್ತಿರುವುದು ವಿಶೇ಼ಷವಾಗಿ ಗಮನಸೆಳೆದಿದೆ. ಯಾತಕ್ಕಾಗಿ ಈ ರೀತಿ ರಂಗನಾಥ್ ಭೇಟಿ ನೀಡುತ್ತಿದ್ದಾರೆ ಎಂಬುದು ಬಹುತೇಕರನ್ನುಕಾಡುತ್ತಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್, ಕಾಗಿನೆಲೆ ಮಠದ ಶ್ರೀ ನಿರಾಂಜನಾನಂದಪುರಿ ಸ್ವಾಮೀಜಿ ಹೀಗೆ ಸಾಲು ಸಾಲು ಅಧಿಕಾರಿಗಳು, ರಾಜಕಾರಣಿಗಳು, ಚಲನಚಿತ್ರ ನಟರು, ಉದ್ಯಮಿಗಳು, ಮಠಾಧೀಶರನ್ನು ರಂಗನಾಥ್ ಬಿಡುವು ಇಲ್ಲದೇ ಭೇಟಿ ನೀಡುತ್ತಿದ್ದಾರೆ.
ಇದಕ್ಕೆ ಮುಖ್ಯ ಕಾರಣ ತಮ್ಮ ಪುತ್ರಿ ವಿವಾಹ ಡಿಸೆಂಬರ್ 4 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದು, ಈ ಶುಭ ಕಾರ್ಯಕ್ಕೆ ತಾವುಗಳು ಆಗಮಿಸಿ ವಧು-ವರರನ್ನು ಆಶೀವರ್ದಿಸಬೇಕೆಂದು ಅಮಂತ್ರಣ ಪತ್ರಿಕೆ ವಿತರಿಸುತ್ತಿದ್ದಾರೆ.