ಬೆಂಗಳೂರು: ಉದ್ಯಮಿಗೆ ಮೋಸ ಮಾಡಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ಈಗ ಸಿಸಿಬಿ ವಶದಲ್ಲಿದ್ದಾಳೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಸದ್ಯ ಆರೋಪಿಗಳು ಹಣ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಅದು ಐದು ಕೋಟಿ ಅಲ್ಲ ಮೂರು ಕೋಟಿ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಪ್ರಕರಣದ ಏಳನೇ ಆರೋಪಿಯಾಗಿರುವ ಶ್ರೀಕಾಂತ್ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಗೋವಿಂದ ಬಾಬು ಅವರಿಂದ ನಾನೇ ಹಣ ತೆಗೆದುಕೊಂಡು, ಚೈತ್ರಾ ಹಾಗೂ ಗಗನ್ ಗೆ ನೀಡಿದ್ದೇನೆ. ಆದರೆ ಆ ಹಣ ಬಳಿಕ ಏನಾಯಿತು ಎಂಬುದು ಗೊತ್ತಿಲ್ಲ ಎಂದೇ ಗ್ಯಾಂಗ್ ಹೇಳುತ್ತಿದೆಯಂತೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನ ಆರೋಪಿಗಳು ಲಾಕ್ ಆಗಿದ್ದಾರೆ.
ಪೊಲೀಸರು ತನಿಖೆ ನಡೆಸುತ್ತಿದ್ದು, ವಿಚಾರಣೆಯನ್ನು ತೀವ್ರವಾಗಿ ನಡೆಸುತ್ತಿದ್ದಾರೆ. ಇದೀಗ ಆರೋಪಿಗಳ ಮೊಬೈಲ್ ಗಳನ್ನು ರಿಟ್ರೀವ್ ಮಾಡಲು ಎಫ್ಎಸ್ಎಲ್ ಗೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ, ಡಿಲೀಟ್ ಆದ ಮೆಸೇಜ್ ಗಳು ಸಿಕ್ಕ ಬಳಿಕ ಸತ್ಯ ತಿಳಿಯಲಿದೆ.
ಗೋವಿಂದ ಬಾಬು ಪೂಜಾರಿಗೆ ಎಂಎಲ್ಎ ಟಿಕೆಟ್ ಕೊಡುವುದಾಗಿ ಚೈತ್ರಾ ಐದು ಕೋಟಿ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಆದ್ರೆ ಈಗ ಚೈತ್ರಾ ಗ್ಯಾಂಗ್ ಮೂರು ಕೋಟಿ ತೆಗೆದುಕೊಂಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿಯ ಹೆಸರು ಬೇರೆ ಕೇಳಿ ಬಂದಿದೆ. ಅದರ ಜೊತೆಗೆ ಗೋವಿಂದ ಬಾಬುಗೆ ಇಂದಿರಾ ಕ್ಯಾಂಟೀನ್ ಕಾಂಟ್ಯಾಕ್ಟ್ ಹಣ ಬರಬೇಕು, ಅದಕ್ಕೆ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಚೈತ್ರಾಳೆ ಹೇಳಿದ್ದಳು. ಆದರೆ ಗೋವಿಂದ ಬಾಬು ಇದನ್ನು ತಳ್ಳಿ ಹಾಕಿದ್ದಾರೆ. ಇದಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.