ನವದೆಹಲಿ: ರಾಜ್ಯದಲ್ಲಿ ಮಳೆ ಇಲ್ಲ. ಕೆಆರ್ಎಸ್ ದಿನೇ ದಿನೇ ಬರಿದಾಗುತ್ತಿದೆ. ಇದರ ನಡುವೆಯೂ ತಮಿಳುನಾಡು ನಮಗೆ ಬರಬೇಕಾದ ನೀರು ಬೇಕೇ ಬೇಕು ಎಂದು ಕೂತಿದೆ. ತಮಿಳುನಾಡಿಗೆ ನೀರು ಬಿಡುವುದನ್ನು ರೈತರು, ಬಿಜೆಪಿ ನಾಯಕರು ವಿರೋಧಿಸಿದ್ದರು. ಈ ಸಂಬಂಧ ಸರ್ವಪಕ್ಷ ಸಭೆ ನಡೆಸಿದ್ದ ರಾಜ್ಯ ಸರ್ಕಾರ, ನೆಲ, ಜಲ, ಭಾಷೆ ಉಳಿಸಲು ಸದಾ ಸಿದ್ಧ ಎಂದಿತ್ತು. ಈ ಬೆನ್ನಲ್ಲೇ ಇಂದು ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಅಫಿಡೆವಿಟ್ ಸಲ್ಲಿಸಿದೆ.
ಕಾವೇರಿ ನೀರು ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ನಾಳೆ ತಮಿಳುನಾಡು ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಕರ್ನಾಟಕವು ಇಂದು ಅಫಿಡೆವಿಟ್ ಸಲ್ಲಿಸಿದೆ. ಈ ಅಫಿಡವಿಟ್ ನಲ್ಲಿ, ಕರ್ನಾಟಕ ಸರ್ಕಾರ, ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಬಿಟ್ಟಿದೆ. ಆದರೂ ತಮಿಳುನಾಡು ಪದೇ ಪದೇ ನೀರು ಬೇಕೆಂದು ಕ್ಯಾತೆ ತೆಗೆಯುತ್ತಿದೆ. ಮೊದಲೇ ಕರ್ನಾಟಕದಲ್ಲಿ ಮಳೆಯಿಲ್ಲ. ಕಾವೇರಿ ನೀರನ್ನು ತಮಿಳುನಾಡು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದೆ.
ಕರ್ನಾಟಕ ಅಗಸ್ಟ್ 22 ವರೆಗೂ 26 ಟಿಎಂಸಿ ನೀರು ಹರಿಸಿದೆ. ಇದರಿಂದ 96 ಟಿಎಂಸಿ ನೀರು ತಮಿಳುನಾಡು ಬಳಿ ಸಂಗ್ರಹವಾದಂತಾಯಿತು. ಸದ್ಯ ತಮಿಳುನಾಡು 21 ಟಿಎಂಸಿ ನೀರಿದೆ ಎಂದು ಹೇಳುತ್ತಿದೆ. ಕುರುವೈ ಬೆಳೆಗೆ 32 ಟಿಎಂಸಿ ನೀರು ಬೇಕಾಗಿದೆ. ಈಗಾಗಲೇ 22 ಟಿಎಂಸಿ ನೀರು ಬಳಕೆ ಮಾಡಿಕೊಂಡಿದೆ. ಬಾಕಿ 9.83 ಟಿಎಂಸಿ ನೀರು ಸೆಪ್ಟೆಂಬರ್ ಅಂತ್ಯದವರೆಗೂ ಬಳಸಬಹುದು. ಆದರೆ ಹೆಚ್ಚು ಪ್ರದೇಶದಲ್ಲಿ ಕುರುವೈ ಬೆಳೆದು ಅಗತ್ಯಕ್ಕಿಂತ ಹೆಚ್ಚು ನೀರಿನ ಬಳಕೆ ಮಾಡುತ್ತಿದೆ.