ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜ.28): ಸಮಸ್ಯೆಗಳನ್ನು ಹೇಳಿಕೊಂಡು ನಿಮ್ಮ ಬಳಿ ಯಾರೆ ಬರಲಿ ಸಮಾಧಾನದಿಂದ ಆಲಿಸಿ ಕಾನೂನು ವ್ಯಾಪ್ತಿಯಲ್ಲಿ ಪರಿಹರಿಸಲು ಪ್ರಾಮಾಣಿಕವಾಗಿ ಶ್ರಮಿಸುವಂತೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ಅಲ್ಪಸಂಖ್ಯಾತ ನೌಕರರಲ್ಲಿ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ವೆಲ್‍ಫೇರ್ ಅಸೋಸಿಯೇಷನ್ ಜಿಲ್ಲಾ ಶಾಖೆ ವತಿಯಿಂದ ಕ್ರೀಡಾಭವನದಲ್ಲಿ ಇತ್ತೀಚೆಗೆ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಪಿ.ಯು.ಸಿ.ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪರೀಕ್ಷಾ ಸಿದ್ದತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸಂಘವಾದರೂ ಸರ್ಕಾರದ ಅಧೀನದಲ್ಲಿ ಕೆಲಸ ಮಾಡಬೇಕಾಗುತ್ತದೆ. ನೌಕರರ ಕುಂದುಕೊರತೆ ಹಾಗೂ ಸಮಸ್ಯೆಗಳನ್ನು ಸಂಘದ ಮೂಲಕ ಸರ್ಕಾರದ ಗಮನ ಸೆಳೆಯಲು ಸಹಕಾರಿಯಾಗಲಿದೆ.
ಅಲ್ಪಸಂಖ್ಯಾತರಲ್ಲಿ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸುವುದು ತುಂಬಾ ಕಡಿಮೆ. ಹಾಗಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಪೋಷಕರುಗಳು ಪ್ರೋತ್ಸಾಹಿಸಿ. ಚಿಕ್ಕ ಚಿಕ್ಕ ವಯಸ್ಸಿನಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಿ ಮಕ್ಕಳು ಕೆಲಸಕ್ಕೆ ಹೋಗುವುದು ನಿಲ್ಲಬೇಕು. ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಸ್ಲಿಂ ನೌಕರರ ವೆಲ್‍ಫೇರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಕ್ಬಾಲ್ ಕೆ. ಮಾತನಾಡಿ ಶಿಕ್ಷಣ ಇಲಾಖೆ ಜೊತೆಗೂಡಿ ಶಾಲೆಯಿಂದ ಹೊರಗುಳಿದಿರುವ ಅಲ್ಪಸಂಖ್ಯಾತ ಮಕ್ಕಳನ್ನು ಗುರುತಿಸಿ ಸಂಘದಿಂದ ಶುಲ್ಕ ಪಾವತಿಸಿ ಮತ್ತೆ ಶಾಲೆಗೆ ದಾಖಲಿಸಲಾಗುವುದು. ಅಲ್ಪಸಂಖ್ಯಾತ ನೌಕರರ ಕುಂದುಕೊರತೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಆದಾಯ ತೆರಿಗೆ ಇಲಾಖೆ ಅಧಿಕಾರಿ ಸುಬ್ಬರಾವ್, ಪಿ.ಎಸ್.ಐ. ಇಮ್ರಾನ್, ತುರುವೆಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಸೈಯದ್ ಅಫಾಕ್ ಅಹಮದ್, ಹೊಳಲ್ಕೆರೆ ಪುರಸಭೆ ಅಧಿಕಾರಿ ವಾಸೀಂ, ಶಿಕ್ಷಣ ಇಲಾಖೆಯ ಇನಾಯತ್, ನ್ಯಾಯವಾದಿ ಬಿ.ಕೆ.ಇರ್ಫಾನುಲ್ಲಾ, ಕಾರ್ಯಪಾಲಕ ಇಂಜಿನಿಯರ್ ಶ್ರೀಮತಿ ಶಾಜಿಯ ಪರ್ವಿನ್, ಕೆ.ಎಂ.ಡಿ.ಸಿ.ಜಿಲ್ಲಾ ವ್ಯವಸ್ಥಾಪಕ ಜುನೈದ್ ಭಾಷ, ಮುಸ್ಲಿಂ ನೌಕರರ ವೆಲ್‍ಫೇರ್ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಖಾಜ ಹುಸೇನ್, ಕಾರ್ಯದರ್ಶಿ ಮಹಮದ್ ತಾಜಿರ್‍ಭಾಷ, ಖಜಾಂಚಿ ಬಷೀರ್‍ಖಾನ್, ಖಾದರ್‍ಭಾಷ, ಗಯಾಜ್ ಅಹಮದ್ ವೇದಿಕೆಯಲ್ಲಿದ್ದರು.