ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್
ಮೊ : 87220 22817
ಚಿತ್ರದುರ್ಗ,(ಡಿ.26) : ಕನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಪದಾಧಿಕಾರಿಗಳು ಇಂದು ನಗರದ ಮಡಿವಾಳ ಮತ್ತು ಗಾಣಿಗ ಸಮುದಾಯದ ಶ್ರೀಗಳನ್ನು ಭೇಟಿ ಮಾಡಿ ನಮ್ಮ ಹೋರಾಟಕ್ಕೆ ಬೆಂಬಲವನ್ನು ನೀಡುವಂತೆ ಮನವಿ ಮಾಡಿದರು.
ವೇದಿಕೆಯ ಅಧ್ಯಕ್ಷರಾದ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಖಂಜಾಚಿ ಮಂಜುನಾಥ್ ಸೇರಿದಂತೆ ಇತರೆ ಸಮುದಾಯದವರು ಶ್ರೀಗಳನ್ನು ಭೇಟಿ ಮಾಡಿ ಪ್ರವರ್ಗ 1 ಮತ್ತು 2(ಎ) ಪಟ್ಟಿಯಲ್ಲಿರುವ ಅತಿ ಹಿಂದುಳಿದ ಸಮುದಾಯಗಳ ಸಂವಿಧಾನಿಕ ಮೀಸಲಾತಿಯನ್ನು ರಕ್ಷಣೆ ಮಾಡಬೇಕಿದೆ, ಈ ಮೀಸಲಾತಿಗೆ ಬೇರೆ ಜನಾಂಗದವರು ಕೈ ಹಾಕಿದ್ದಾರೆ. ನಮಗೂ ಇದರಲ್ಲಿ ಮೀಸಲಾತಿಯನ್ನು ನೀಡುವಂತೆ ಸರ್ಕಾರದ ಮೇಲೆ ಒತ್ತಡವನ್ನು ಹಾಕುತ್ತಿದ್ದಾರೆ. ಮಹಾರಾಜರ ಕಾಲದಿಂದಲೂ ಇಂದಿನವರೆಗೂ ವಿವಿಧ ರೀತಿಯ ಆಯೋಗಗಳು ನೀಡಿದ ವರದಿಯನ್ವಯ ಅತೀ ಹಿಂದುಳಿದ ಸಮುದಾಯಗಳು ಸ್ವಲ್ಪ ಮಟ್ಟಿಗೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು ಎಂದಿದ್ದಾರೆ.
ಹಿಂದುಳಿದ ವರ್ಗಗಳಿಗೆ ಒಟ್ಟಾರೆ ಶೇ. 32 ಮೀಸಲಾತಿ ಇದ್ದು ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಕೂಡಿದೆ. ಇದನ್ನು ನೀಡುವಾಗ ಯಾವುದೇ ರೀತಿಯ ಮಾನದಂಡವನ್ನು ಅನುಸರಿಸಿಲ್ಲ, ಈ ಹಿನ್ನಲೆಯಲ್ಲಿ ಶೇ.32ರ ಮೀಸಲಾತಿಯನ್ನು ಪುನರ್ ಪರಿಶೀಲಿಸಿ ಆಯಾ ಜಾತಿಗಳ ಜನ ಸಂಖ್ಯೆನುಸಾರವಾಗಿ ಮೀಸಲಾತಿಯನ್ನು ನೀಡುವಂತೆ ಒತ್ತಾಯಿಸಿದ್ದು, ಇದಕ್ಕೆ ಅನುಗುಣವಾಗಿ ಹೋರಾಟವನ್ನು ರೂಪಿಸಲಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮ್ಮ ಸಮಸ್ಯೆಯನ್ನು ವಿವರಿಸಲಾಗಿದೆ. ಇದರ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗಡೆಯವರನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದರು.
ಈ ಹಿನ್ನಲೆಯಲ್ಲಿ ವೇದಿಕೆಯ ಪದಾಧಿಕಾರಿಗಳು ರಾಜ್ಯ ಪ್ರವಾಸವನ್ನು ಮಾಡುವುದರ ಮೂಲಕ ಜನ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಇದರ ಅಂಗವಾಗಿ ವಿವಿಧ ಮಠಾಧೀಶರನ್ನು ಸಹಾ ಭೇಟಿ ಮಾಡಿ ಅವರ ಬೆಂಬಲವನ್ನು ಸಹಾ ಕೊರಲಾಗುತ್ತಿದೆ. ಇದರ ಅಂಗವಾಗಿ ಮಡಿವಾಳ ಸಮುದಾಯದ ಶ್ರೀ ಮಡಿವಾಳ ಮಾಚಿದೇವ ಶ್ರೀಗಳು ಮತ್ತು ಗಾಣಿಗ ಸಮುದಾಯದ ಶ್ರೀ ಬಸವಕುಮಾರ ಶ್ರೀಗಳನ್ನು ಬೇಟಿ ಮಾಡಿ ಅವರ ಬೆಂಬಲವನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಕಾಡುಗೊಲ್ಲರ ಕ್ಷೇಮಾಭೀವೃದ್ದಿ ಸಂಘದ ರಾಜ್ಯಾಧ್ಯಕ್ಷ ಶಿವುಯಾದವ್, ವಿಶ್ವಕರ್ಮ ಸಮುದಾಯದ ಪ್ರಸನ್ನ, ಪಿಂಜಾರ್ ಸಮುದಾಯದ ಷಫೀವುಲ್ಲಾ, ಸವಿತಾ ಸಮಾಜದ ಎನ್.ಡಿ.ಕುಮಾರ್, ಈಡಿಗ ಸಮುದಾಯದ ಜಗದೀಶ್, ನೇಕಾರ ಸಮುದಾಯದ ಗೋ.ತಿಪ್ಪೇಶಿ, ಮಡಿವಾಳ ಸಮುದಾಯದ ರುದ್ರಣ್ಣ, ತಿಂಗಳ ಸಮುದಾಯದ ಶಿವಶಂಕರ್, ಯಳವ ಸಮಾಜದ ಮಂಜುನಾಥ್, ನಾಗರಾಜ್, ತಿಮ್ಮಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.