ಮುಂಬೈ: ಮರಾಠಿಯ ಕೆಲವು ಪುಂಡರು ನಿನ್ನೆಯಿಂದ ಮತ್ತೆ ಹೊಸದಾಗಿ ಕ್ಯಾತೆ ತೆಗೆದಿದ್ದಾರೆ. ಇದರಿಂದ ಸಾರಿಗೆ ಇಲಾಖೆಗೆ ನಷ್ಟವಾಗಿದೆ. ಇಂದು ಕೂಡ ಪುಂಡರ ನಡವಳಿಕೆ ಮುಂದುವರೆದಿದೆ. ಈ ಕಾವಿನ ನಡುವೆ ಮಹಾರಾಷ್ಟ್ರದ ಮಾಜಿ ಸಿಎಂ ಉದ್ದವ್ ಠಾಕ್ರೆ ಹಾಲಿ ಸಿಎಂ ಏಕನಾಥ್ ಶಿಂಧೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ನಮ್ಮ ಮುಖ್ಯಮಂತ್ರಿಗೆ ಕರ್ನಾಟಕದ ಮುಖ್ಯಮಂತ್ರಿ ಬಗ್ಗೆ ಮಾತನಾಡುವ ಧೈರ್ಯವಿಲ್ಲ ಬಿಡು ಎಂದಿದ್ದಾರೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, ಮಹಾರಾಷ್ಟ್ರದ ಹಲವು ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿದ್ದಾರೆ. ಈ ಮಾತನ್ನು ನಾನು ಖಂಡಿಸುತ್ತೇನೆ. ಬಸವರಾಜ್ ಬೊಮ್ಮಾಯಿ ಅವರು ಬಹುಶಃ ದೆಹಲಿಯ ನಾಯಕರಿಂದ ಆಶೀರ್ವಾದ ಪಡೆದುಕೊಂಡಿರಬೇಕು. ಈ ಮಧ್ಯೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಗ್ರಾಮಗಳನ್ನು ವಶಕ್ಕೆ ಪಡೆಯುತ್ತೇವೆ. ಮಹಾರಾಷ್ಟ್ರಕ್ಕೆ ಸೇರುವ ಒಂದು ಗ್ರಾಮವನ್ನು ಬಿಟ್ಟುಕೊಡುವುದಿಲ್ಲ. ಬೆಳಗಾವಿ, ನಿಪ್ಪಾಣಿ, ಕಾರವಾರವನ್ನು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಿಎಂ ಬೊಮ್ಮಾಯಿ ಅವರು, ನಮ್ಮ ಗಡಿ ಹಾಗೂ ಜನರನ್ನು ರಕ್ಷಿಸಲು ಶಕ್ತಿ ಮೀರಿ ಹೋರಾಟ ಮಾಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನ್ಯಾಯ ನಮ್ಮ ಕಡೆಯಿದೆ. ಎರಡೂ ರಾಜ್ಯಗಳ ಮಧ್ಯೆ ಶಾಂತಿ ಕಾಪಾಡಲು ಮಹಾರಾಷ್ಟ್ರ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.