ಚಿತ್ರದುರ್ಗ, (ನ.19) ; ಐತಿಹಾಸಿಕ ಹಿನ್ನಲೆ ಹೊಂದಿರುವ ನಗರದ ಸಮೀಪದಲ್ಲಿರುವ ಕ್ಯಾಸಾಪುರ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ (ವೀರ ಪ್ರತಾಪ ಮಾರುತಿ) ಶನಿವಾರ ಸಕಲ ಭಕ್ತಿ ಗೌರವಗಳೊಂದಿಗೆ ವಿಶೇಷವಾಗಿ ಕಡೆ ಕಾರ್ತೀಕೋತ್ಸವ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರೆವೇರಿದ್ದು, ಪುಷ್ಪಾಲಂಕಾರ, ಮಹಾಮಂಗಳಾರತಿ ಜೊತೆಗೆ ಅನ್ನದಾಸೋಹ ಕಾರ್ಯಕ್ರಮಗಳು ಜರುಗಿದವು. ಭಕ್ತರ ಇಷ್ಟಾರ್ಥಗಳು ಹಾಗೂ ಮನಸಂಕಲ್ಪಗಳು ನೆರವೇರಲು ಭಕ್ತರಿಂದಲೇ ಮಂಡಕ್ಕಿ ರಾಶಿ ಫಲಹಾರ ವಿಶೇಷ ಸೇವೆ ಶ್ರೀಆಂಜನೇಯನಿಗೆ ಸಮರ್ಪಿಸಲಾಯಿತು.
ಜೊತೆಗೆ ಕಾರ್ತೀಕೋತ್ಸವ ಅಂಗವಾಗಿ ಸಹಸ್ರ ದೀಪಾಲಂಕಾರ ಪೂಜಾ ಕೈಂಕಾರ್ಯಗಳು, ಪ್ರಸಾದ ವಿನಿಯೋಗ ಭಕ್ತರಿಂದ ನೆರವೇರಿದವು.
ವಾರ್ಷಿಕವಾಗಿ ಶ್ರೀದೇವಸ್ಥಾನದಲ್ಲಿ ರಾಮೋತ್ಸವ, ಶ್ರಾವಣ ವಿಶೇಷ ಪೂಜೆ ಜೊತೆಗೆ ಕಡೇ ಕಾರ್ತೀಕೋತ್ಸವ ಕಾರ್ಯಕ್ರಮಗಳನ್ನು ಭಕ್ತಿ ಗೌರವಗಳೊಂದಿಗೆ ನೆರವೇರಿಸಲಾಗುತ್ತಾ ಬರುತ್ತಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಆರ್.ನಾಗಭೂಷಣ ಶಾಸ್ತ್ರಿ ವಿವರಿಸಿದರು. ಕಾರ್ತೀಕೋತ್ಸವ ಅಂಗವಾಗಿ ಕ್ಯಾಸಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಹಾಗೂ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಕಾರ್ತೀಕೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆ ಸೇರಿದಂತೆ ಅನ್ಯ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ ಶ್ರೀ ಮಾರುತಿ ದರ್ಶನ ಪಡೆದರು.
ಕೋಟಿ ರೂ. ವೆಚ್ಚದಲ್ಲಿ ಘಂಟಾ ಗೋಪುರ;
ಮನುಷ್ಯನಿಗೆ ಮಾನಸಿಕ ನೆಮ್ಮದಿ, ಸ್ಥೈರ್ಯ, ಧೈರ್ಯಗಳನ್ನು ದೇವಾಲಯಗಳ ಘಂಟೆಯ ನಾದ ನೀಡಬಲ್ಲವು. ಅದೇ ಮಾದರಿಯಲ್ಲಿ ಭಕ್ತರ ಸಂಕಲ್ಪಗಳು ನೆರವೇರಲು, ಮಾನಸಿಕ ದೈರ್ಯ, ಸೈರ್ಯ ತುಂಬಲು ಸಹಕಾರಿಯಾಗುವಂತಹ ಘಂಟಾ ಗೋಪುರವನ್ನು ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಿರ್ಮಿಸಲಾಗುತ್ತಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ಈ ದಾರ್ಮಿಕ ಸೇವೆ ನಡೆಯುತ್ತಿದ್ದು, ಈಗಾಗಲೇ 80 ಲಕ್ಷ ರೂ.ಗಳ ಕಾರ್ಯ ಮುಗಿದಿದ್ದು, ಇನ್ನೂ 20 ಲಕ್ಷ ರೂ.ಗಳ ಕೆಲಸ ನಡೆಯುತ್ತಿದೆ. ಪ್ರಸ್ತುತ ಬರಲಿರುವ ಶ್ರಾವಣ ಮಾಸದದಲ್ಲಿ ಕಳಸಸ್ಥಾಪನೆ, ಗೋಪುರ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನ ಅರ್ಚಕರಾದ ಶ್ರೀ ಆರ್.ನಾಗಭೂಷಣ ಶಾಸ್ತ್ರಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.