ಚಿತ್ರದುರ್ಗ, (ನ.06) : ಬೆಸ್ಕಾಂನ ಚಿತ್ರದುರ್ಗ ವಲಯ ಕಚೇರಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ವರೆಗಿನ ಉಚಿತ ವಿದ್ಯುತ್ ಸೌಲಭ್ಯ ಕಲ್ಲಿಸುವ ರಾಜ್ಯ ಸರಕಾರದ ʼಅಮೃತ ಜ್ಯೋತಿ’ ಯೋಜನೆ ಅನುಷ್ಠಾನ ಪ್ರಗತಿ ಸಭೆಯನ್ನು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಇಂದಿಲ್ಲಿ ನಡೆಸಿದರು.
ಬೆಸ್ಕಾಂ ಚಿತ್ರದುರ್ಗ ವಲಯ ಕಚೇರಿ ವ್ಯಾಪ್ತಿಯಲ್ಲಿ 78,000 ಎಸ್ ಸಿ , ಎಸ್ಟಿ ಬಿಪಿಎಲ್ ಗ್ರಾಹಕರಿದ್ದು, ಈಗಾಗಲೇ 20,000 ಗ್ರಾಹಕರ ದಾಖಲೆಗಳನ್ನು ಸೇವಾ ಸಿಂಧು ವೆಬ್ ಪೋರ್ಟ್‌ಲ್ ನಲ್ಲಿ ನೋಂದಾಯಿಸಿ ಅಮೃತ ಜ್ಯೋತಿ ಯೋಜನೆ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡಿದರು.
ಇನ್ನುಳಿದ ಫಲಾನುಭವಿಗಳ ವಿವರಗಳನ್ನು ಈ ತಿಂಗಳ 10 ರೊಳಗೆ ಸೇವಾ ಸಿಂಧು ವೆಬ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲು ಬೆಸ್ಕಾಂ ಎಂಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ, ದಾಖಲೆಗಳನ್ನು ಸೇವಾ ಸಿಂಧು ಪೋರ್ಟಲ್ ಗೆ ಸ್ಥಳದಲ್ಲೇ ದಾಖಲಿಸಬೇಕು. ಒಂದು ವೇಳೆ ಇಂಟರ್ ನೆಟ್ ಸಂಪರ್ಕ ಸಿಗದಿದ್ದಲ್ಲಿ, ನೆಟ್ ಸೌಲಭ್ಯ ಸಿಗುವ ಸ್ಥಳಕ್ಕೆ ಹೋಗಿ ಅಗತ್ಯ ದಾಖಲೆಗಳನ್ನು ನೋಂದಣಿ ಮಾಡಲು ಬೆಸ್ಕಾಂ ಎಂಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶೀಘ್ರವೇ ಫಲಾನುಭವಿಗಳ ದಾಖಲೆಗಳನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಲು ಉಪ ವಿಭಾಗವಾರು ತಂಡಗಳನ್ನು ರಚಿಸಲು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಅರ್ಹ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ ಅರ್ಜಿ ನೋಂದಣಿ ಮಾಡಿಸಿದರು.
ಸಭೆಯಲ್ಲಿ ಬೆಸ್ಕಾಂ ನಿರ್ದೇಶಕ (ಹಣಕಾಸು) ದರ್ಶನ್ , ಚಿತ್ರದುರ್ಗ ವಲಯ ಕಚೇರಿ ಮುಖ್ಯ ಇಂಜಿನಿಯರ್ ಗೋವಿಂದಪ್ಪ ಹಾಗು ಬೆಸ್ಕಾಂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.