ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ , (ನ.04): ಸಣ್ಣ ರೈತ ದೊಡ್ಡ ರೈತ ಎಂದು ಬೇರ್ಪಡಿಸದೆ ಬೆಳೆ ಹಾನಿಯಿಂದಾಗಿ ಕಂಗಾಲಾಗಿರುವ ಎಲ್ಲರಿಗೂ ಸಮಾನವಾಗಿ ಪರಿಹಾರ ವಿತರಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರೈತ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಸಿದ್ದನಗೌಡ ಪಾಟೀಲ್ ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವಿಪರೀತ ಮಳೆಯಾಗಿರುವುದರಿಂದ ಎಲ್ಲಾ ಬಗೆಯ ಬೆಳೆ ನಾಶವಾಗಿದೆ. ಬಿತ್ತಿದ ಖರ್ಚು ಸಿಗದ ಕಾರಣ ಈರುಳ್ಳಿಯನ್ನು ರೈತರು ಹೊಲದಲ್ಲಿಯೇ ಕೊಳೆಯಲು ಬಿಟ್ಟಿದ್ದಾರೆ. ಇನ್ನು ಶೇಂಗಾ ಹೇಳ ಹೆಸರಿಲ್ಲದಂತಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಣ್ಣ ಹಿಡುವಳಿದಾರ, ದೊಡ್ಡ ಹಿಡುವಳಿದಾರ ಎಂದು ಸರ್ಕಾರ ತಾರತಮ್ಯ ಮಾಡುವ ಬದಲು ಕೂಡಲೆ ಪರಿಹಾರ ನೀಡಬೇಕು. ಹತ್ತಿ, ಮೆಕ್ಕೆಜೋಳ ಒಂದು ಎಕರೆಗೆ 25 ಸಾವಿರ ರೂ.ಪರಿಹಾರ ಕೊಡಬೇಕು. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ತವರು ಜಿಲ್ಲೆ ಹಾವೇರಿಯಲ್ಲಿಯೇ ಶೇಂಗಾ ಹಾಳಾಗಿದೆ. ಧಾರವಾಡ ಕೂಡ ಹೊರತಾಗಿಲ್ಲ ಎಂದು ಅನ್ನದಾತ ರೈತನ ಸಂಕಷ್ಠವನ್ನು ಹೇಳಿಕೊಂಡರು.
ಕೊಳೆರೋಗಕ್ಕೆ ತುತ್ತಾಗಿರುವ ಅಡಿಕೆಗೆ ಹಳದಿ, ಕಪ್ಪು ಚುಕ್ಕೆ ಮೂಡಿ ಮಳೆಗೆ ನೆಲಕ್ಕುದುರುತ್ತಿವೆ. ಯಾವ ಬೆಳೆಯೂ ರೈತನ ಕೈಗೆ ಸಿಗುತ್ತಿಲ್ಲ. ಒಂದು ಎಕರೆ ಅಡಿಕೆ ತೋಟಕ್ಕೆ ಒಂದು ಲಕ್ಷ ರೂ.ಪರಿಹಾರ ಕೊಡಬೇಕು. ಮೈಸೂರು, ಹಾಸನದಲ್ಲಿ ಅತಿಯಾದ ಮಳೆಯಿಂದಾಗಿ ತಂಬಾಕು ಹಾಳಾಗಿ ಖರ್ಚಿಗೂ ಕೈಯಲ್ಲಿ ಕಾಸಿಲ್ಲದಂತೆ ರೈತರು ಪರದಾಡುತ್ತಿದ್ದಾರೆ. ಕಾಯಿ, ಪಲ್ಯೆ, ಮಳೆನೀರು ಪಾಲಾಗಿದೆ. ಹಣ ಪಾವತಿಸಿರುವ ರೈತರ ಖಾತೆಗಳಿಗೂ ಬೆಳೆವಿಮೆ ಜಮೆ ಆಗಿಲ್ಲ. ರೈತರನ್ನು ನಿರ್ಲಕ್ಷಿಸಿದರೆ ಸರ್ಕಾರ ಮುಂದಿನ ದಿನಗಳಲ್ಲಿ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆಂದು ಸಿದ್ದನಗೌಡ ಪಾಟೀಲ್ ಎಚ್ಚರಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಉಪಾಧ್ಯಕ್ಷರುಗಳಾದ ಸಿದ್ದರಾಮಪ್ಪ ರಂಜಿಣಿಗಿ, ಬಿ.ಸಿ.ಪಾಟೀಲ್, ನರಸಿಂಹಪ್ಪ, ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ ಅಳಗವಾಡಿ, ಬಸ್ತಿಹಳ್ಳಿ ನಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ ಹಳಿಯೂರು, ಬಸವಣ್ಣಪ್ಪ, ನೀಲಪ್ಪ, ವೀರಣ್ಣ, ಷಣ್ಮುಖಪ್ಪ, ಗಿರೀಶ್‍ರೆಡ್ಡಿ, ರವಿ, ನಿಂಗಮ್ಮ, ನಿರಂಜನಮೂರ್ತಿ, ಬಸವರಾಜಪ್ಪ, ಪರಮಶಿವಣ್ಣ, ಸಿ.ಕುಬೇಂದ್ರನಾಯ್ಕ, ಬಿ.ಗಜೇಂದ್ರ, ಜಿ.ಜ್ಯೋತಿ ಜಮ್ಮೇನಹಳ್ಳಿ, ಮೈಸೂರಿನ ನಿಂಗಮ್ಮ, ರವಿ, ರವಿಸಿದ್ದೇಗೌಡ ಇನ್ನು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.