ಚಿತ್ರದುರ್ಗ,(ಅಕ್ಟೋಬರ್21) : ದೇಶಕ್ಕಾಗಿ ಹೋರಾಡುತ್ತಾ ವೀರ ಸ್ವರ್ಗ ಪಡೆದ ಸಿಆರ್‍ಪಿಎಫ್ ಪೊಲೀಸರ ಸ್ಮರಣೆಗಾಗಿ ಹುತಾತ್ಮ ದಿನ ಎಂದು ಆಚರಿಸಲಾಗುತ್ತಿದ್ದು, ಹುತಾತ್ಮರ ತ್ಯಾಗ ಬಲಿದಾನದಿಂದ ನಾವೆಲ್ಲರೂ ದೇಶದ ಒಳಗೆ ಸುರಕ್ಷಿತವಾಗಿ ನೆಮ್ಮದಿಯಿಂದ ನಾವು ಬದುಕುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕರ್ತವ್ಯ ನಿರ್ವಹಿಸುವಂತಹ ಸಂದರ್ಭದಲ್ಲಿ ಪೊಲೀಸರು ಮೃತಪಟ್ಟಲ್ಲಿ ಅನುಕಂಪದ ಆಧಾರದ ಆ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಹುದ್ದೆಗೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಪೊಲೀಸ್ ಇಲಾಖೆಯ ಕುಟುಂಬದವರು ಸರ್ಕಾರದಿಂದ ಸಿಗುವಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಪರಶುರಾಮ್ ಮಾತನಾಡಿ, 1959 ರ ಅಕ್ಟೋಬರ್ 10 ರಂದು ಡಿ.ಎಸ್.ಪಿ. ಕರಣ್‍ಸಿಂಗ್ ಸಿ.ಆರ್.ಪಿ.ಎಫ್. ತುಕಡಿಯ ಮುಖಂಡತ್ವ ವಹಿಸಿಕೊಂಡು ಲಡಾಕ್ ಪ್ರದೇಶದಲ್ಲಿರುವ ಹಾಟ್ ಸ್ಟ್ರಿಂಗ್ಸ್ ಹತ್ತಿರ ಗಡಿ ಭಾಗದಲ್ಲಿ ಗಸ್ತು ಕರ್ತವ್ಯದಲ್ಲಿ ನಿರತವಾಗಿತ್ತು. ಅಂತಹ ಅಂದರ್ಭದಲ್ಲಿ ನಮ್ಮ ಸಿ.ಆರ್.ಪಿ.ಎಫ್. ತುಕಡಿಗಿಂತ ಹೆಚ್ಚಿನ ಸಂಖ್ಯೆಯ ತುಕಡಿ ಹಾಗೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಚೀನಾ ಸೈನಿಕರು ಹೊಂದಿದ್ದರು. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಭಾರತೀಯ ಸಿ.ಆರ್.ಪಿ.ಎಫ್ ಪೊಲೀಸರು ಎದೆಗುಂದದೆ ಧೈರ್ಯ ಹಾಗೂ ಶೌರ್ಯದಿಂದ ಕೇವಲ ರೈಫಲ್‍ಗಳಿಂದ ಉಸಿರು ಇರುವವರೆಗೂ ಅವರ ವಿರುದ್ದ ಹೋರಾಡಿ 10 ಸಿ.ಆರ್.ಪಿ.ಎಫ್. ಯೋಧರು ವೀರ ಮರಣ ಹೊಂದಿದರು.
9 ಸಿ.ಆರ್.ಪಿ.ಎಫ್. ಯೋಧರನ್ನು ಚೀನಾ ಸೈನಿಕರು ಬಂಧನ ಮಾಡಿದರು. ಈ ಸಮರದಲ್ಲಿ ಹೋರಾಡುತ್ತಾ 10 ಜನ ಸಿ.ಆರ್.ಪಿ.ಎಫ್ ಯೋಧರು ವೀರ ಮರಣ ಹೊಂದಿದರೆ 9 ಜನ ಸಿ.ಆರ್.ಪಿ.ಎಫ್ ಯೋಧರನ್ನು ಚೈನಾ ಸೈನಿಕರು ದಸ್ತಗಿರಿ ಮಾಡಿ ಬಂಧಿಸಿದರು ಎಂದರು.
ವೀರ ಮರಣ ಹೊಂದಿದ ಸಿ.ಆರ್.ಪಿ.ಎಫ್ ಯೋಧರಿಗೆ ಇಡೀ ದೇಶ ಶ್ರದ್ಧಾಂಜಲಿ ಅರ್ಪಿಸಿ ಅವರ ಧೈರ್ಯ, ಶೌರ್ಯ ಕೊಂಡಾಡಿತು. ದೇಶಕ್ಕಾಗಿ ಹೋರಾಡುತ್ತಾ ವೀರ ಸ್ವರ್ಗ ಪಡೆದ ಈ ಶೂರರ ಸ್ಮರಣೆಗಾಗಿ ಲಡಾಕ್ ಅಬಾಸಿ ಚೀನ್‍ಭಾಗದಲ್ಲಿ 18 ಸಾವಿರ ಅಡಿ ಎತ್ತರದ ಮೇಲೆ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದೆ. 2021ರ ಸೆಪ್ಟೆಂಬರ್ 1 ರಿಂದ 2022ರ ಆಗಸ್ಟ್ 31 ವರೆಗೆ ದೇಶದಲ್ಲಿ 264 ಜನ ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿ ಇರುವಂತಹ ಸಂದರ್ಭದಲ್ಲಿ ಹುತಾತ್ಮರಾಗಿದ್ದಾರೆ. ಅದರಲ್ಲಿ ಕರ್ನಾಟಕದ 11 ಜನ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್‍ಸ್ವಾಮಿ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಹಾಗೂ ಪೊಲೀಸ್ ಅಧೀಕ್ಷಕ ಪಿ.ಪಾಪಣ್ಣ, ಗೃಹ ರಕ್ಷಕ ದಳದ ಕಮಾಂಡೆಂಟ್ ಸಿ.ಕೆ ಸಂಧ್ಯಾ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕ ಜಿ.ಎಂ ತಿಪ್ಪೇಸ್ವಾಮಿ, ಚಿತ್ರದುರ್ಗ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಅನಿಲ್ ಕುಮಾರ್, ಹಿರಿಯೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ರೋಷನ್ ಜಮೀರ್, ಚಳ್ಳಕೆರೆ ವಿಭಾಗದ ಪೊಲೀಸ್ ಉಪಾಧೀಕ್ಷಕ ರಮೇಶ್ ಕುಮಾರ್, ಚಿತ್ರದುರ್ಗ ಡಿ.ಸಿ.ಆರ್.ಬಿ ಪೊಲೀಸ್ ಉಪಾಧೀಕ್ಷಕ ಲೊಕೇಶ್ವರಪ್ಪ, ಸಂಚಾರಿ ಠಾಣೆಯ ಪಿಎಸ್‍ಐ.ರಾಜು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.