ಕಾಂತಾರ ಸಿನಿಮಾ ಅಬ್ಬರ ನಿಲ್ಲುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಕಾಂತಾರ ಈಗ ಭಾರತದ ಚಿತ್ರರಂಗದಲ್ಲಿಯೂ ತನ್ನದೇ ಚಾಪು ಮೂಡಿಸಲು ಹೊರಟಿದೆ. ಕರಾವಳಿ ಭಾಗದ ಸಂಸ್ಕೃತಿ, ಅಲ್ಲಿನ ಆಚಾರ-ವಿಚಾರಗಳನ್ನೆಲ್ಲಾ ತೆರೆಯ ಮೇಲೆ ತಂದಿದ್ದಾರೆ. ಸದ್ಯ ಕನ್ನಡದಲ್ಲಿ ನೋಡಿದವರಿಂದ ನಮ್ಮ ಭಾಷೆಗೂ ಡಬ್ ಮಾಡುವಂತೆ ಡಿಮ್ಯಾಂಡ್ ಶುರುವಾದ ಬೆನ್ನಲ್ಲೇ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ.
ಸಿನಿಮಾದಲ್ಲಿ ಭೂತಕೋಲ ಆರಾಧನೆಯ ಸಂಸ್ಕೃತಿ ಬಗ್ಗೆ ಪರಿಚಯ ಮಾಡಲಾಗಿದೆ. ಆ ಭೂತಕೋಲವನ್ನು ಹಿಂದೂ ಸಂಸ್ಕೃತಿಯಲ್ಲಿ ಬರುವ ಒಂದು ಆಚರಣೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ನಟ ಚೇತನ್ ಮಾತನಾಡಿದ್ದು, ಆ ಸಂಸ್ಕೃತಿ ಹಿಂದೂ ಸಂಸ್ಕೃತಿ ಅಲ್ಲ ಅಂತ ಹೇಳಿ ಚರ್ಚೆ ಹುಟ್ಟು ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚೇತನ್, ನಮ್ಮ ಕನ್ನಡದ ಚಲನಚಿತ್ರ ಕಾಂತಾರವೂ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನರ ಸಂಪ್ರದಾಯಗಳು. ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ, ಅದರಾಚೆಯಾಗಲಿ, ಸತ್ಯಸಂಗತಿಗಳೊಂದಿಗೆ ತೋರಿಸಬೇಕೆಂದು ನಾವೂ ಕೇಳುತ್ತೇವೆ ಎಂದಿದ್ದಾರೆ.