ಕೋಲಾರ: ಇತ್ತಿಚೆಗಷ್ಟೇ ರಾಜ್ಯ ಸರ್ಕಾರ ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದೀಗ ಒಕ್ಕಲಿಗರಿಗೂ ಮೀಸಲಾತಿ ಬೇಕು ಎಂಬುದನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿರುವಂತ ನಿರ್ಮಲಾನಂದನಾಥ ಸ್ವಾಮೀಜಿಗಳು ಹೇಳಿದ್ದಾರೆ. ಮೀಸಲಾತಿ ಸಿಗದೆ ಹೋದರೆ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಜಿಲ್ಲೆಯಲ್ಲಿ ಒಕ್ಕಲಿಗರ ಸಮುದಾಯದ ವತಿಯಿಂದ ಸಾಂಸ್ಕೃತಿಕ ಭವನ ಉದ್ಘಾಟನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿ ಹೆಚ್ಚಿಸುವುದಾದರೆ ನಮ್ಮ ಸಮುದಾಯಕ್ಕೂ ಹೆಚ್ಚಿಸಿ. ಮೀಸಲಾತಿ ಹೆಚ್ಚಿಸುವುದಾದರೆ ಶೇ. 8 ಪ್ರತಿಶತದಷ್ಟು ಹೆಚ್ಚಿಸಿ. ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಮಾತನಾಡುವುದು ಬೇಡ ಎಂದೇ ಸುಮ್ಮನಿದ್ದೇವೆ. ಕಾನೂನ ಸಮ್ಮತವಾಗಿ ನಮ್ಮ ಬೇಡಿಕೆಯನ್ನು ಈಡೇರಿಸದೆ ಇದ್ದರೆ ಹಂತ ಹಂತವಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
1993ರ ನಂತರ ನಮ್ಮ ಸಮುದಾಯದವರು ಯಾವುದೇ ರೀತಿಯ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಅಷ್ಟೆ ಅಲ್ಲ ಅಂದಿನಿಂದಲೂ ಮೀಸಲಾತಿ ಕೂಗು ನಮ್ಮ ಸಮುದಾಯದಲ್ಲಿ ಎದ್ದಿಲ್ಲ. ಒಬಿಸಿಗೆ ಶೇ 35 ರಷ್ಟು ಮೀಸಲಾತಿ ನೀಡಲಾಗಿದ್ದು, ಇದರಲ್ಲಿ ಒಕ್ಕಲಿಗರಿಗೆ ಶೇ 4 ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ಈ ಮೀಸಲಾತಿ ಸಾಕಾಗುವುದಿಲ್ಲ, ಶೇ 8 ರಷ್ಟು ಏರಿಸಿ, ಒಟ್ಟು ಶೇ 12 ಪ್ರತಿಶತದಷ್ಟು ಮೀಸಲಾತಿ ನೀಡಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹಿಸಿದ್ದಾರೆ.